Advertisement

ಗಡಿಯಲ್ಲಿ ಕನ್ನಡಕ್ಕಾಗಿ ಶ್ರಮಿಸಿದ ಹಿರೇಮಠ

11:33 AM Aug 29, 2017 | |

ಭಾಲ್ಕಿ: ಗಡಿ ಪ್ರದೇಶದಲ್ಲಿ ಕನ್ನಡ ಉಳಿಸಿ, ಬೆಳೆಸುವಲ್ಲಿ ಹಿರೇಮಠದ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದು
ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಹೇಳಿದರು. ಕರಡ್ಯಾಳ ಗ್ರಾಮದ ಚನ್ನಬಸವೇಶ್ವರ ಗುರುಕುಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದತ್ತು ಕೇಂದ್ರದ ನೂತನ ಕಟ್ಟಡ, ವೈದ್ಯ ಸಂಗಣ್ಣ ಆಸ್ಪತ್ರೆ, ಮಮತೆಯ ತೊಟ್ಟಿಲು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಿಜಾಮನ ಕಾಲದಲ್ಲಿ ಲಿಂ| ಚನ್ನಬಸವ ಪಟ್ಟದ್ದೇವರು ಹೊರಗಡೆ ಉರ್ದು ಬೋರ್ಡ್‌ ಹಾಕಿ ಒಳಗಡೆ ಕನ್ನಡ ಕಲಿಸುವುದರ ಮೂಲಕ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಕನ್ನಡ ಸದಾ ಬೆಳಗುವಂತೆ ಮಾಡಿದ್ದಾರೆ ಎಂದರು. ಭಾಲ್ಕಿ ಹಿರೇಮಠ ಸದಾ ರಚನಾತ್ಮಕ ಕಾರ್ಯಗಳನ್ನು ಮಾಡುವುದರ ಮೂಲಕ ಸಮಾಜದ ಏಳ್ಗೆ ಮತ್ತು ಬೆಳವಣಿಗೆಗೆ ಶ್ರಮಿಸುತ್ತಿದೆ. ಹೆತ್ತ ತಂದೆ- ತಾಯಿಗಳಿಗೆ ಬೇಡವಾದ ಮಕ್ಕಳನ್ನು ಸುಮಾರು ವರ್ಷಗಳಿಂದ ಸಾಕುತ್ತಿರುವ ಬಸವಲಿಂಗ ಪಟ್ಟದ್ದೇವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ವರ್ಷ ಸುಮಾರು 960 ಮಕ್ಕಳು ಅಪೌಷ್ಟಿಕತೆ ಕೊರತೆಯಿಂದ ಸಾವನ್ನಪ್ಪಿವೆ.
ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲೂ ಅಂದಾಜು 500 ಮಕ್ಕಳು ಮೃಥಪಟ್ಟಿದ್ದಾರೆ ಎಂದು ಕಳವಳ
ವ್ಯಕ್ತಪಡಿಸಿದರು. ಅನಾಥ, ನಿರ್ಗತಿಕ ಮಕ್ಕಳನ್ನು ಸಲಹುದು ಪುಣ್ಯದ ಕಾರ್ಯ. 64 ಮಕ್ಕಳನ್ನು ತಮ್ಮ ದತ್ತು ಕೇಂದ್ರದಲ್ಲಿ ಇರಿಸಿಕೊಂಡು ಅವರಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸಾಮಾನ್ಯ ಮಾತಲ್ಲ. ಮಕ್ಕಳ ಭಾಗ್ಯ ಪ್ರಾಪ್ತಿಯಾಗದ ಎಷ್ಟೋ ಗಂಡ- ಹೆಂಡತಿಯರಿಗೆ ದತ್ತು ಕೇಂದ್ರ ಮಕ್ಕಳನ್ನು ನೀಡಿ ಅವರ ಮೊಗದಲ್ಲಿ ಮಂದಹಾಸ
ಮೂಡುವಂತೆ ಮಾಡಿದೆ ಎಂದು ಹೇಳಿದರು. ಗ್ರಾಮೀಣ ಭಾಗದಲ್ಲಿ ಉತ್ತಮ ಸಂಸ್ಥೆ ಸ್ಥಾಪಿಸುವುದರ ಮೂಲಕ ಪಟ್ಟದ್ದೇವರು ಗಡಿ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಪ್ರತಿವರ್ಷ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿ. ವಿದ್ಯಾರ್ಥಿಗಳು ಇನ್ನೂ ಚೆನ್ನಾಗಿ ಅಭ್ಯಸಿಸಿ ಮೇರು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ಹಿರೇಮಠದ ಹಿರಿಯ ಸ್ವಾಮೀಜಿ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಮೂಢನಂಬಿಕೆ, ಕಂದಾಚಾರಗಳಿಗೆ ಅವಕಾಶ ನೀಡದೇ ಅಪ್ಪಟ ಬಸವಾಭಿಮಾನಿಯಾಗಿ ಆಡಳಿತ ನಡೆಸಿರುವ ಶೆಟ್ಟರ ಅವರು ಆದರ್ಶ ರಾಜಕಾರಿಣಿ ಎಂದು ಬಣ್ಣಿಸಿದರು. ಕಮಲನಗರವನ್ನು ತಾಲೂಕು ಕೇಂದ್ರವನ್ನಾಗಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಮಹಾರಾಷ್ಟ್ರದ ಉಜ್ಜಯಿನಿಯಲ್ಲಿ ಸಿಕ್ಕ ಅನಾಥ ಮಗುವನ್ನು ಸಾಕುವುದರ ಮೂಲಕ ದತ್ತು ಕೇಂದ್ರ ಆರಂಭಿಸಲಾಯಿತು ಎಂದು ಸ್ಮರಿಸಿದರು. ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಮಾಜಿ ಶಾಸಕರಾದ ಪ್ರಕಾಶ
ಖಂಡ್ರೆ, ಸುಭಾಷ ಕಲ್ಲೂರ, ಎಂಎಲ್‌ಸಿ ರಘುನಾಥ ಮಲ್ಕಾಪುರೆ, ಬಿಜೆಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಬಾಬು ವಾಲಿ, ಗುರುನಾಥ ಕೊಳ್ಳುರ, ಬಸವರಾಜ ಧನ್ನೂರ, ಶಿವರಾಜ ಗಂದಗೆ, ಗೋವಿಂದರಾವ್‌ ಬಿರಾದರ, ಪದ್ಮಾಕರ ಪಾಟೀಲ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸಂಜು ಡಾಕುಳಗಿ, ರಕ್ಷಣಾಧಿಕಾರಿ ಪ್ರಶಾಂತ, ಡಾ| ಜಾಧವ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next