Advertisement

ಮತದಾನ ಬಹಿಷ್ಕಾರಕ್ಕೆ ಹಿರೇಮನೆ ಗ್ರಾಮಸ್ಥರ ನಿರ್ಧಾರ

05:36 PM Apr 08, 2019 | Naveen |

ಸಾಗರ: ತಾಲೂಕಿನ ತಾಳಗುಪ್ಪ ಸಮೀಪದ ಹಿರೇಮನೆ ಗ್ರಾಮದ 22 ಕುಟುಂಬದ 60 ಜನ ಮತದಾರರು 2019ರ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧಾರ ಮಾಡಿದ್ದಾರೆ. ಕಳೆದ ಹತ್ತು ವರ್ಷದಿಂದ ಗ್ರಾಮದಲ್ಲಿ ಜ್ಯೋತಿಷಿಯೊಬ್ಬರು ಸಾಮೂಹಿಕ ಕಿರುಕುಳ ನೀಡುತ್ತಿರುವುದನ್ನು ಪ್ರತಿಭಟಿಸಿ ಜನ ಈ ನಿಲುವು ಪ್ರಕಟಿಸಿದ್ದಾರೆ.

Advertisement

2010ನೇ ಇಸವಿಯಲ್ಲಿ ಗ್ರಾಮದ ಜನರು ಬಳಸುತ್ತಿದ್ದ 3 ಎಕರೆ ಗೋಮಾಳ ಗ್ರಾಮದ ವ್ಯಕ್ತಿಯೊಬ್ಬರು ಬೇಲಿ ಹಾಕಿದ್ದನ್ನು ಪ್ರತಿಭಟಿಸಿ ಗ್ರಾಮಸ್ಥರು ಸಾಗರದ ತಹಶೀಲ್ದಾರರಿಗೆ ಅರ್ಜಿ
ಸಲ್ಲಿಸಿದ್ದರು. ತಹಶೀಲ್ದಾರ್‌ ಸರ್ಕಾರಿ ಜಾಗವೆಂದು ಪರಿಗಣಿಸಿ ಬೇಲಿ ಹಾಕಿರುವ ಜಾಗವನ್ನು ಖುಲ್ಲಾ ಮಾಡಿ ಹೋಗಿದ್ದರು. ನಂತರ ಅರ್ಜಿ ಹಾಕಿದ ವ್ಯಕ್ತಿಗಳೇ ಬೇಲಿ ಕಿತ್ತಿದ್ದಾರೆಂದು ಖಾಸಗಿ ದೂರು ದಾಖಲಿಸಿ ಗ್ರಾಮದ ಜನರು ನಿರಂತರ ಕೋರ್ಟಿಗೆ ಓಡಾಡುವಂತೆ ಮಾಡಲಾಗಿದೆ. ಅವರ ಅಕ್ರಮಗಳ ಕುರಿತು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಸರ್ಕಾರಿ ಜಾಗ ಉಳಿಸಲು ಹೊರಟ ಗ್ರಾಮದ ಹೆಂಗಸರು, ಯುವಕರು ಹಾಗೂ ವಯೋವೃದ್ಧರಾದಿಯಾಗಿ ಗ್ರಾಮಸ್ಥರು ತಿಂಗಳಿಗೆರಡು ಬಾರಿ ಸಾಗರದ ಕೋರ್ಟಿಗೆ ಅಲೆಯುವಂತಾಗಿದೆ.

ಒತ್ತುವರಿ ಮಾಡಿ ತಪ್ಪು ಮಾಡಿದವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಜನರು ಅನುಭವಿಸುತ್ತಿರುವ ಈ ಕಿರುಕುಳ ನಿಲ್ಲಿಸುವಂತೆ ಸಾಗರ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ಖುದ್ದು ದೂರು
ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜ್ಯೋತಿಷ್ಯ ಹೇಳುವ
ವ್ಯಕ್ತಿಯ ಮನೆಗೆ ಕಂದಾಯ ಇಲಾಖೆ ಅಧಿಕಾರಿಗಳು, ಪರ ಊರಿನ ಪ್ರತಿಷ್ಠಿತ ವ್ಯಕ್ತಿಗಳು ಭೇಟಿ ನೀಡುತ್ತಿರುತ್ತಾರೆ. ಅವರನ್ನು ಉಪಯೋಗಿಸಿಕೊಂಡು ಗ್ರಾಮಸ್ಥರಿಗೆ ಕಿರುಕುಳ ನೀಡಲಾಗುತ್ತಿದ್ದು,
ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮದ ಜನ ಅಳಲು ವ್ಯಕ್ತಪಡಿಸಿದ್ದಾರೆ. ನಮಗೆ ನೆಮ್ಮದಿ ಬದುಕು ಕೊಡಲಾಗದ ವ್ಯವಸ್ಥೆಗೆ ನಾವು ಮತ ನೀಡುವುದರಲ್ಲಿ ಅರ್ಥವಿಲ್ಲ
ಎಂದು ಮತದಾನ ಮಾಡದಿರುವ ಈ ತೀರ್ಮಾನಕ್ಕೆ ಬಂದಿದ್ದೇವೆ.

ಮತದಾನದ ದಿನ ಕಪ್ಪುಬಟ್ಟೆ ಧರಿಸಿ ಉಪವಾಸ ಸತ್ಯಾಗ್ರಹ ಕೂರುವ ನಿರ್ಧಾರ ನಮ್ಮದು ಎಂದು ತಲವಾಟ ಗ್ರಾಪಂ
ಸದಸ್ಯ ಶ್ರೀಕಾಂತ ರಾವ್‌ ಹೊತ್ಗುಂಡಿ, ಶ್ರೀಪಾದ ಶಾಸ್ತ್ರಿ, ಜಯಂತ್‌ ಪಟೇಲ್‌, ಟಿ.ಡಿ. ಲಕ್ಷ್ಮೀ ನಾರಾಯಣಭಟ್‌, ಶಾಂತಾರಾಮ ಅಸವಳ್ಳೆ, ರಮೇಶ್‌ ಹಳೇಮನೆ, ಬಾಲಚಂದ್ರ ಎಚ್‌.ಟಿ, ವೆಂಕಟರಮಣ, ಸವಿತಾ ಶಾಂತಾರಾಂ, ಉಮಾ ಬಾಲಚಂದ್ರ, ಶರಾವತಿ ಶಾಸ್ತ್ರಿ, ವಿದ್ಯಾ ರಮೇಶ್‌, ತಿಮ್ಮಪ್ಪ ಹೊತ್ಗುಂಡಿ ಇತರರು ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next