ಹಿರೇಕೆರೂರ: ಇಲ್ಲಿನ ಚಿಕ್ಕೇರೂರು ರಸ್ತೆಯಲ್ಲಿದ್ದ ನೂರಾರು ವರ್ಷಗಳ ಇತಿಹಾಸ ಹೊಂದಿದ್ದ ಅಶ್ವತ್ಥ ವೃಕ್ಷ ತೆರವುಗೊಳಿಸುವ ಕಾರ್ಯ ಪೊಲೀಸರ ಭದ್ರತೆಯಲ್ಲಿ ಬುಧವಾರ ನಡೆಯಿತು.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಸೇರಿದ ರಸ್ತೆಯಲ್ಲಿದ್ದ ಈ ಅಶ್ವತ್ಥ ವೃಕ್ಷವನ್ನು ತೆರವುಗೊಳಿಸಲು ಸ್ಥಳೀಯರು, ಕೆಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಅನೇಕ ತಿಂಗಳಿಂದ ತೆರವು ಕಾರ್ಯ ನೆನೆಗುದಿಗೆ ಬಿದ್ದಿತ್ತು. ಹಲವು ಪ್ರತಿಭಟನೆಗಳು ಸಹ ನಡೆದಿದ್ದವು. ಇದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಗ್ಗೆ ತಹಶೀಲ್ದಾರ್ ಸಮ್ಮುಖದಲ್ಲಿ ಸಭೆಗಳು ನಡೆದಿದ್ದವು.
ಬುಧವಾರ ಬೆಳಗಿನ ಜಾವ ಪೊಲೀಸ್ ಭದ್ರತೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೆರವು ಕಾರ್ಯ ಆರಂಭಿಸಿದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದಾಗ ಸ್ಥಳದಲ್ಲಿದ್ದ ತಹಶೀಲ್ದಾರ್ ಆರ್.ಎಚ್.ಭಾಗವಾನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಟಿ.ವಿ.ಸುರೇಶ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜಾರಾಂ ಪವಾರ ಸೇರಿದಂತೆ ಮೊದಲಾದ ಅಧಿಕಾರಿಗಳು ಸ್ಥಳೀಯರ ಮನವೊಲಿಸಲು ಮುಂದಾದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಆರ್.ಎಚ್.ಭಾಗವಾನ್, ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಸೇರಿದ ಈ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ ಮಧ್ಯದಲ್ಲಿ ಅಶ್ವತ್ಥ ವೃಕ್ಷ ಇದ್ದುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ತೆರವುಗೊಳಿಸದೇ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿರಲಿಲ್ಲ, ವಿಶ್ವಬ್ಯಾಂಕ್ ನೆರವಿನೊಂದಿಗೆ ಕಾಮಗಾರಿ ನಡೆಯುತ್ತಿದ್ದು, ಸೆಪ್ಟಂಬರ್ ಒಳಗೆ ಕಾಮಗಾರಿ ಮುಗಿಯದೇ ಹೋದರೆ ಹಣ ವಾಪಸ್ ಹೋಗುತ್ತದೆ. ಹೀಗಾಗಿ ಅಧಿಕಾರಿಗಳು, ಗುತ್ತಿಗೆದಾರರು, ಸಂಘಟನೆಗಳ ಪ್ರಮುಖರನ್ನು ಕರೆದು ಮಾತುಕತೆ ನಡೆಸಿ, ತೆರವುಗೊಳಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಯಿತು. ಒಂದು ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಅಶ್ವತ್ಥ ವೃಕ್ಷದ ಕೆಳಗೆ ನಾಗರ ಕಟ್ಟೆ ನಿರ್ಮಿಸಿಕೊಂಡು ಪೂಜೆ ನಡೆಸಲಾಗುತ್ತಿತ್ತು. ಹೀಗಾಗಿ ಧಾರ್ಮಿಕ ಭಾವನೆಗೆ ಧಕ್ಕೆ ಬರಬಾರದು ಎಂಬ ಉದ್ದೇಶದಿಂದ ಪಟ್ಟಣ ವ್ಯಾಪ್ತಿಯಲ್ಲಿ ಹಂಸಭಾವಿ-ಚಿಕ್ಕೇರೂರು ಕ್ರಾಸ್ ಬಳಿ ಇರುವ ಪಟ್ಟಣ ಪಂಚಾಯತಿಗೆ ಸೇರಿದ ಜಾಗೆಯಲ್ಲಿ ಅಶ್ವತ್ಥ ಗಿಡ ನೆಟ್ಟಿದ್ದೇವೆ. ಒಂದು ತಿಂಗಳಲ್ಲಿ ಅಲ್ಲಿ ಪುಟ್ಟ ದೇವಸ್ಥಾನ ನಿರ್ಮಾಣವಾಗಲಿದೆ. ದೇವಸ್ಥಾನ ನಿರ್ಮಿಸಿಕೊಡಲು ಗುತ್ತಿಗೆದಾರರು ಸಹ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಬಜರಂಗದಳ ಜಿಲ್ಲಾ ಸಂಚಾಲಕ ಅನಿಲ ಹಲವಾಗಿಲ ಪ್ರತಿಕ್ರಿಯೆ ನೀಡಿ, ರಸ್ತೆ ಸಮರ್ಪಕ ವಿಸ್ತರಣೆಗೆ ತಹಶೀಲ್ದಾರ್ ಅವರು ಜವಾಬ್ದಾರಿ ತೆಗೆದುಕೊಂಡಿದ್ದು, ಜೊತೆಗೆ ಪಟ್ಟಣ ಪಂಚಾಯತಿಗೆ ಸೇರಿದ ಜಾಗೆಯಲ್ಲಿ ಅಶ್ವತ್ಥ ವೃಕ್ಷ ನೆಟ್ಟು, ನಾಗರಕಟ್ಟೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.