Advertisement

ಹಿರೇಕೆರೂರ:ಧಾರ್ಮಿಕ-ಸಾಂಸ್ಕೃತಿಕತೆಗೆ ಹೆಸರಾದ ಮಡ್ಲೂರು

06:37 PM May 24, 2023 | Team Udayavani |

ಹಿರೇಕೆರೂರ: ಧಾರ್ಮಿಕ ಹಾಗೂ ಸಾಂಸ್ಕೃತಿಕತೆಗೆ ಹೆಸರಾಗಿರುವ ತಾಲೂಕಿನ ಮಡ್ಲೂರು ಗ್ರಾಮ, ಕೆರೆ-ಕಟ್ಟೆಗಳ ನೀರಾವರಿ ಕ್ಷೇತ್ರದಿಂದ ಸಮೃದ್ಧ ಕೃಷಿ  ಭೂಮಿಯನ್ನೂ ಹೊಂದಿದೆ.

Advertisement

ಈ ಗ್ರಾಮ ತಾಲೂಕು ಕೇಂದ್ರ ಹಿರೇಕೆರೂರಿನಿಂದ 18 ಕಿ.ಮೀ., ಹೋಬಳಿ ಕೇಂದ್ರ ಹಂಸಭಾವಿಯಿಂದ 10 ಕಿ.ಮೀ ಅಂತರದಲ್ಲಿದೆ. ಇಲ್ಲಿನ ಶಾಸನ ಫಲಕದಲ್ಲಿ ಬೇರೆ ಬೇರೆ ಕಾಲಕ್ಕೆ ಸೇರಿದ ಎರಡು ಶಾಸನಗಳಿವೆ. ಒಂದು ಶಾಸನ ಕ್ರಿ.ಶ. 1079 ರಿಂದ 1126ರ ಅವಧಿಯ ಮಾಹಿತಿ ನೀಡುತ್ತದೆ. ಇನ್ನೊಂದು ಶಾಸನ 1247ಕ್ಕೆ ಸೇರಿದ್ದಾಗಿದೆ. ಇವುಗಳಲ್ಲಿ ಮೂರು ಕಡೆ ಈ ಗ್ರಾಮದ ಹೆಸರು ಮಡಲೂರು ಎಂದು ಉಲ್ಲೇಖವಾಗಿದೆ.ಆದರೆ, 18ನೇ ಶತಮಾನದ ಇನ್ನೊಂದು ಶಾಸನದಲ್ಲಿ ಮಡಲುರ ಎಂದಿದೆ.

ಚಾಲುಕ್ಯ ವಂಶದ ವಿಕ್ರಮಾದಿತ್ಯನ ಕಾಲದಲ್ಲಿ ಈ ಊರು ಸುತ್ತ 7 ಹಳ್ಳಿಗಳಿಗೆ ಕೇಂದ್ರವಾಗಿತ್ತು. ಹೀಗಾಗಿ, ಇದಕ್ಕೆ ಮಡಲು (ಮಧ್ಯದ+ಹೊಟ್ಟೆಯಂತಹ) ಮಡಲೂರು ಮುಂದೆ ಮಡ್ಲೂರು ಎಂದಾಗಿದೆ ಎನ್ನಲಾಗುತ್ತಿದೆ.

ಒಂದು ಕಾಲದಲ್ಲಿ ಪ್ಲೇಗ್‌ ರೋಗ ಬಂದು ಈ ಊರು ಬೇರೊಂದು ಕಡೆಗೆ ಸ್ಥಳಾಂತರವಾಗಿತ್ತು. ನಂತರದ ದಿನಗಳಲ್ಲಿ ಮೊದಲಿದ್ದ ಈ ಸ್ಥಳದಲ್ಲಿ ಮೊಲವು ನಾಯಿಯನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯವನ್ನು ಕಂಡ ಜನರು, ಇದು ಗಂಡುಮೆಟ್ಟಿನ
ಸ್ಥಳವೆಂದು ಭಾವಿಸಿ ಮೊದಲಿದ್ದ ಊರಿಗೆ ಬಂದು ವಾಸವಾದರು. ಹೀಗಾಗಿ, ಮೊದಲೂರು ಎಂದೂ, ನಂತರ ಮಡ್ಲೂರು ಎಂದು ಬದಲಾಗಿದೆ ಎಂದು ಸಾಹಿತಿ, ಸಂಶೋಧಕ ಡಾ|ಭೋಜರಾಜ ಪಾಟೀಲ ಅವರು ತಮ್ಮ ಹಿರೇಕೆರೂರ ತಾಲೂಕಿನ ಗ್ರಾಮನಾಮ ಚರಿತೆ ಕಿರು ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

ಈ ಗ್ರಾಮದಲ್ಲಿ 5110 ಜನ ಸಂಖ್ಯೆ ಯಿದ್ದು, ನಿಟ್ಟೂರು, ಚೊಗಚಿಕೊಪ್ಪ, ಮಡೂÉರ ಗ್ರಾಮಗಳನ್ನೊಳಗೊಂಡ ಗ್ರಾಮ ಪಂಚಾಯಿತಿಯನ್ನು ಹೊಂದಿದೆ. ಈ ಗ್ರಾಮ ಹೆಚ್ಚಿನ ಪ್ರಮಾಣದಲ್ಲಿ ನೀರಾವರಿ ಕೃಷಿ ಭೂಮಿ ಹೊಂದಿದ್ದು, ಸುಮಾರು 35 ಕೆರೆಗಳಿವೆ. ಇವುಗಳಿಂದ ರೈತಾಪಿ ಜನ ಕೆರೆ ನೀರು ಬಳಸಿ ಭತ್ತ ಬೆಳೆಯುತ್ತಾರೆ. ಮಳೆಯಾಶ್ರಿತವಾಗಿ ಮೆಕ್ಕೆಜೋಳ, ಹತ್ತಿ, ರಾಗಿ, ನೀರಾವರಿ ಯಿಂದ ಟೊಮೆಟೊ, ಮೆಣಸು, ಕಬ್ಬು ಇನ್ನಿತರ ಬೆಳೆಗಳನ್ನು ಬೆಳೆಯುತ್ತಾರೆ.

Advertisement

ಈ ಗ್ರಾಮದ ಮುರುಘಾಮಠ ಸುತ್ತಲಿನ ಗ್ರಾಮಗಳ ಭಕ್ತರ ನೆಚ್ಚಿನ ತಾಣವಾಗಿದ್ದು, ಇಲ್ಲಿನ ಮುರುಘರಾಜೇಂದ್ರ ಸ್ವಾಮೀಜಿ ಭಕ್ತರಿಗೆ ದಾರಿದೀಪವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಇಲ್ಲಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ಭಾನುವಾರ ಭಕ್ತರ ಕಷ್ಟಗಳಿಗೆ ಪರಿಹಾರ ಮಾರ್ಗಗಳನ್ನು ನೀಡಲಾಗುತ್ತಿದೆ.

ಇಲ್ಲಿನ ಪ್ರಾಚೀನ ಮೂಕೇಶ್ವರ ದೇವಸ್ಥಾನದಲ್ಲಿ ಪ್ರತಿ ಶ್ರಾವಣದ ಕೊನೆಯ ವಾರದಲ್ಲಿ ಅನ್ನಸಂತರ್ಪಣೆ ವೇಳೆ ಕೆರೆಯಲ್ಲಿ ಬೆಳೆಯುವ ಕೇಸು ಸಸ್ಯದ ಸಾಂಬಾರು ಮಾಡಿ ಸವಿಯಲಾಗುತ್ತದೆ. ಗ್ರಾಮದ ಮಹಾರುದ್ರಪ್ಪ ಇಟಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇದಲ್ಲದೇ, ಗ್ರಾಮದಲ್ಲಿ ಸಾಂಸ್ಕೃತಿಕವಾಗಿ ವೀರಭದ್ರೇಶ್ವರ ನವಚೇತನ ದೊಡ್ಡಾಟ ಕಲಾ ತಂಡವಿದ್ದು, ಇವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದು ಗ್ರಾಮದ ಶಿಕ್ಷಕ ಮಲ್ಲೇಶಪ್ಪ ಲಕ್ಕೊಂಡ್ರ
ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next