ಹಿರೇಬಾಗೇವಾಡಿ: ಗ್ರಾಮದಲ್ಲಿ ಅತಿ ಹೆಚ್ಚು ಪ್ರಕರಣಗಳಾಗಿದ್ದರೂ ಎಲ್ಲ ಜನರು ಸಹಕಾರ ನೀಡಿದ್ದಾರೆ. ಸರ್ಕಾರದ ಆದೇಶವನ್ನು ಪಾಲನೆ ಮಾಡಿದ್ದರಿಂದ ಕೋವಿಡ್ ಸೋಂಕಿನಿಂದ ಈ ಗ್ರಾಮವು ಮುಕ್ತವಾಗಿದೆ. ಶುಕ್ರವಾರ ಮಧ್ಯ ರಾತ್ರಿಯಿಂದ ಸೀಲ್ ಡೌನ್ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಶುಕ್ರವಾರ ಗ್ರಾಮದಲ್ಲಿ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಫುಡ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮವನ್ನು ಸೀಲ್ ಡೌನ್ ಮಾಡಿದ್ದರಿಂದ ಗ್ರಾಮಸ್ಥರು ಎರಡು ತಿಂಗಳ ಕಾಲ ಬಹಳ ತೊಂದರೆ ಅನುಭವಿಸಿದ್ದಾರೆ. ಹಾಗೂ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸೋಂಕು ಮುಕ್ತ ಗ್ರಾಮವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರದಿಂದ ಕೊಡುವ ಫುಡ್ ಕಿಟ್‌ಗಳನ್ನು ಸಾಂಕೇತಿಕವಾಗಿ ವಿತರಿಸ ಲಾಯಿತು. ಇನ್ನುಳಿದವುಗಳನ್ನು ಮನೆ ಮನೆಗೆ ಹಂಚುವ ವ್ಯವಸ್ಥೆ ಮಾಡಲಾಗಿದೆ ಎಂದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ಮತ್ತು ಎಲ್ಲ ಜನಪ್ರತಿನಿ ಧಿಗಳು ನಿಮ್ಮೊಡನೆ ಇದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಂಡು ಜನರು ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂದರು.
ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೇ ಹಿರೇಬಾಗೇವಾಡಿ ಬಹುದೊಡ್ಡ ಗ್ರಾಮವಾಗಿದ್ದು, ಸುದೀರ್ಘ 60 ದಿನಗಳ ಕಾಲ ಸೀಲ್ ಡೌನ್ ಕಷ್ಟದ ಸಮಯದಲ್ಲೂ ಇಲ್ಲಿನ ಜನರು ಸ್ವಾಭಿಮಾನ ಮತ್ತು ತಾಳ್ಮೆಯಿಂದ ಸರಕಾರದ ನಿಯಮ ಮತ್ತು ಕಾನೂನುಗಳನ್ನು ಪಾಲಿಸಿ ಕೋವಿಡ್ ಮುಕ್ತ ಮಾಡಲು ಸಹಕರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ನಮ್ಮ ಮನವಿಗೆ ಸ್ಪಂದಿಸಿ ಗ್ರಾಮದ ಕುಟುಂಬಗಳಿಗೆ ಸರ್ಕಾರದಿಂದ ಫುಡ್ ಕಿಟ್ ಪೂರೈಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ಕೋವಿಡ್ ನೋಡಲ್ ಅಧಿಕಾರಿ ರಾಜೇಂದ್ರ ಚೋಳನ್,ಜಿಲ್ಲಾ ಪಂಚಾಯಿತಿ ಸಿಇಒ ಡಾ| ಕೆ.ವಿ ರಾಜೇಂದ್ರ, ಪೋಲಿಸ್ ಆಯುಕ್ತ ಬಿ.ಎಸ್. ಲೊಕೇಶಕುಮಾರ, ಡಿಸಿಪಿ ಸೀಮಾ ಲಾಟ್ಕರ, ಗ್ರಾ.ಪಂ ಸದಸ್ಯರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.