Advertisement

Hirebagewadi ಅನೈತಿಕ ಚಟುವಟಿಕೆಗಳಿಗೆ ತಾಣವಾದ ಪಾಳು ಬಿದ್ದ ವಿದ್ಯಾರ್ಥಿ ವಸತಿ ನಿಲಯ!

08:08 PM Jun 12, 2024 | Team Udayavani |

ಹಿರೇಬಾಗೇವಾಡಿ: ಆರ್ಥಿಕವಾಗಿ, ಸಾಮಾಜಿಕವಾಗಿ, ಹಿಂದುಳಿದವರ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರವೂ ಸಾಕಷ್ಟು ಅನುದಾನವನ್ನು ಒದಗಿಸುತ್ತಿದ್ದು, ಹಲವಾರು ಯೋಜನೆಗಳನ್ನು ರೂಪಿಸಿ ಸಮುದಾಯದ ಪ್ರಗತಿಗೆ ಶ್ರಮಿಸುತ್ತಿದೆ. ಆದರೆ ಕೆಲ ಸಂದರ್ಭಗಳಲ್ಲಿ ಇಂಥಹ ಹಲವಾರು ಯೋಜನೆಗಳು ಕಾರಣಾಂತರಗಳಿಂದ ಇನ್ನೂ ತಳ ಸಮುದಾಯವನ್ನು ತಲುಪುವಲ್ಲಿ ತೀರಾ ವಿಳಂಬವಾಗುತ್ತಿದೆ. ಸರ್ಕಾರಗಳು ಯಾವುದಾದರೂ ಅಷ್ಠೆ ! ಆಡಳಿತ ಶಾಹಿಯಲ್ಲಿನ ಜಿಡ್ಡುಗಳಾದ ಈ ಚಲತಾಹೈ ಎಂಬ ಧೋರಣೆ ಹಾಗು ಚುನಾಯಿತ ಜನಪ್ರತಿನಿಧಿಗಳ ಆಲಸೈತನಗಳೆ ಇದಕ್ಕೆ ಮುಖ್ಯ ಕಾರಣ ಎಂಬ ಆರೋಪಗಳು ತಳ ಸಮುದಾಯದ ವಲಯದಿಂದಲೇ ಕೇಳಿ ಬರುತ್ತಿವೆ. ಇದಕ್ಕೊಂದು ನಿದರ್ಶನವೇ ಇಲ್ಲಿನ ವಿದ್ಯಾರ್ಥಿ ವಸತಿ ನಿಲಯ !

Advertisement

07-08-1989 ರಲ್ಲಿ ನಿರ್ಮಾಣವಾದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡವು ಯಾವಾಗಲೋ ಜೀರ್ಣಾವಸ್ಥೆಯ ಹಂತ ತಲುಪಿದ್ದು, ಸಾರ್ವಜನಿಕರ ಆಗ್ರಹದ ಮೇರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕಳೆದ ವರ್ಷವೇ ಶಿಥಿಲಾಸ್ಥೆಯ ಈ ಕಟ್ಟಡವನ್ನು ನೆಲೆಸಮಗೊಳಿಸಲು ಲೋಕೋಪಯೋಗಿ ಇಲಾಖೆಗೆ ಶಿಫಾರಸ್ಸು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಬೇರೆ ಖಾಸಗಿ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿದೆ.

ಪಾಳು ಬಿದ್ದ ವಸತಿ ನಿಲಯ: ಸ್ಥಳಾಂತರಗೊಂಡಿರುವ ಬಿಸಿಎಂ ಸ್ವಂತ ಕಟ್ಟಡವು ಕಳೆದ ಒಂದು ವರ್ಷದಿಂದಲೂ ಖಾಲಿಯಾಗಿಯೆ ಉಳಿದಿದೆ. ಹಾಗಾಗಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಈ ಕಟ್ಟಡವು ಇದೀಗ ಅಪ್ಪಾ ಪೋಲಿಗಳಿಗೆಲ್ಲಾ ಆಶ್ರಯ ತಾಣವಾಗಿದೆ. ಅಲ್ಲದೆ ಜೂಜುಕೋರರು, ಕುಡಕರು ಸೇರಿದಂತೆ ಅನೈತಿಕ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ. ಈ ಕಟ್ಟಡದ ಸುತ್ತಮುತ್ತಲು ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ ಮತ್ತು ಗ್ರಾಮ ಪಂಚಾಯತಿಯ ಕಾರ್ಯಾಲಯಗಳು ಇವೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಗಲು ಹೊತ್ತಿಲನಲ್ಲಿಯೆ ನಡೆಯುವ ಈ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇಲ್ಲಿ ಅಧಿಕಾರಿಗಳು ಇಲ್ಲವೇ ? ಎಂದು ಪ್ರಶ್ನೆ ಮಾಡುತ್ತ ಬಿಸಿಎಂ ಇಲಾಖೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ನುಸುಳು ಕೋರರಿಂದ ಗಲೀಜಾಗುತ್ತಿರುವ ಕಟ್ಟಡ
ವಿದ್ಯಾರ್ಥಿಗಳಿಗೆ ಆಶ್ರಯತಾಣವಾಗ ಬೇಕಿದ್ದ ಈ ಬಿಸಿಎಂ ವಸತಿ ನಿಲಯವು ಸರ್ಕಾರದ ಉದ್ದೇಶಿತ ಗುರಿಯು ಸಾಫಲ್ಯವನ್ನು ಕಾಣದೆ ಇತ್ತ ನೆಲಸಮವೂ ಆಗದೆ ವಿರೂಪಗೊಂಡಿದ್ದು, ಅಂತರ್ ಪಿಶಾಚಿಯಂತೆ ನಿಂತಿದೆ. ಜಿಲ್ಲಾಡಳಿತದ ನಿಧಾನಗತಿಯ ಕಾರ್ಯಕ್ಕೆ ಸಾಕ್ಷಿಯಾಗಿದ್ದು, ಸಾರ್ವಜನಿಕರ ದಿನನಿತ್ಯದ ಟೀಕೆಗಳಿಗೆ ಗುರಿಯಾಗುತ್ತಿರುವುದು ಶೋಭೆ ತರುವಂಥದಲ್ಲ.

ಇಲ್ಲಿ ಪೋಕರಿ ಹುಡುಗರು ಬಿಸಿಎಂ ಕಟ್ಟಡದ ಆವರಣ ಗೋಡೆ ಒಡೆದು, ವಸತಿ ನಿಲಯದ ಗೇಟಿನ ಕೀಲಿ ಮುರಿದು ಕಟ್ಟಡದ ಒಳಗೆ ನುಗ್ಗಿ ಕೋಣೆಗಳ ಕಿಟಕಿ ಗಾಜುಗಳ ಒಡೆದಿದ್ದು, ಬಾಗಿಲುಗಳನ್ನು ಮುರಿಯುತ್ತಿದ್ದಾರೆ. ಅಲ್ಲದೆ ಕಚೇರಿ ಒಳಗಿದ್ದ ವಿದ್ಯಾರ್ಥಿ ನಾಮಫಲಕ, ಕೇರಂ ಬೋರ್ಡ್, ಸೇರಿದಂತೆ ಇತರೆ ಸಾಮಗ್ರಿಗಳನ್ನು ಹೊರಗೆ ಎಸೆದು ಅಟ್ಟಹಾಸ ಮೆರೆದಿದ್ದಾರೆ. ವಿದ್ಯಾರ್ಥಿಗಳ ಕೆಲ ಕೋಣೆಗಳಲ್ಲಿ ಗಲೀಜು ಮಾಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಬಿಸಿಎಂ ಅಧಿಕಾರಿಗಳಿಗೆ ತಿಳಿಸಲಾಗಿದ್ದರು ಸಹ ಅವರು ಜಾಣ ಕುರುಡರಂತೆ ವರ್ತಿಸುತ್ತಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ.

Advertisement

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪಾಲಿಗೆ ಕಾಯಕಲ್ಪ ನೀಡಬೇಕಿರುವ ಬಿಸಿಎಂ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಭಾವನೆ ತಾಳಿರುವುದುಇಲಾಖಾ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ. ಹಾಗಾಗಿ ಆದಷ್ಟು ಬೇಗ ಈ ಸಮಸ್ಯೆ ಪರಿಹಾರದ ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಈಗಲಾದರೂ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯ ಸಂಪೂರ್ಣ ಶಿಥಿಲಗೊಂಡಿದೆ.ಇದು 34 ವರ್ಷಗಳ ಹಿಂದೆ ಭೂಸೇನಾ ನಿಗಮದಿಂದ ನಿರ್ಮಿಸಲಾಗಿದ್ದ ಈ ವಿದ್ಯಾರ್ಥಿನಿಲಯವು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಜ್ಞಾನಾಶ್ರಯದ ತಾಣವಾಗಿದ್ದು, ಆದಷ್ಟು ಬೇಗ ಸಮಸ್ಯೆ ಪರಿಹಾರದ ಬಗ್ಗೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಶಿಥಿಲಗೊಂಡಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳನ್ನು ಕಳೆದ ವರ್ಷವೇ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಕಟ್ಟಡವನ್ನು ನೆಲಸಮಗೊಳಿಸಲು ಲೋಕೋಪಯೋಗಿ ಇಲಾಖೆಗೆ ಬರೆಯಲಾಗಿದೆ.
-ಶಿವಪ್ರೀಯಾ
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಬಿಸಿಎಂ ಹಾಸ್ಟೇಲ್ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡು ಒಂದು ವರ್ಷವಾಗಿದೆ. ಹಾಗಾಗಿ ಅದನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಿದರೆ ವಿದ್ಯಾರ್ಥಿಗಳಿಗೆ ಅನೂಕೂಲ. ಸರ್ಕಾರಕ್ಕೂ ಬಾಡಿಗೆ ಹಣ ಉಳಿತಾಯ. ಆದರೆ ಪಾಳು ಬಿದ್ದ ಕಟ್ಟಡದ ಒಂದು ಇಟ್ಟಗೆ ಕೂಡ ಅಲ್ಲಾಡಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಹಾಗಾದರೆ ಹಿಂದುಳಿದ ವಿದ್ಯಾರ್ಥಿಗಳ ಬಿಸಿಎಂ ಸ್ವಂತ ಕಟ್ಟಡದ ಭಾಗ್ಯಕ್ಕೆ ಇನ್ನು ಎಷ್ಟು ದಿನ ಕಾಯಬೇಕು. ?
-ಬಾಪು ನಾವಲಗಟ್ಟಿ
ಗ್ರಾ.ಪಂ ಮಾಜಿ ಸದಸ್ಯರು
ಹಿರೇಬಾಗೇವಾಡಿ.

ಬಿಸಿಎಂ ಹಾಸ್ಟೆಲ್ ಶಿಥಿಲಗೊಂಡಿರುವ ಬಗ್ಗೆ ಕಳೆದ ಎರಡು ವರ್ಷಗಳ ಹಿಂದೇನೆ ಇಲಾಖಾ ಅಧಿಕಾರಿಗಳ ಗಮನಕ್ಕಿದೆ. ಆದರೆ ಕ್ರಮದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿಕ್ರಿಯೆಗೆ ನೀಡದಿರುವುದು ಅವರ ನಿರಾಸಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ
-ಸ್ಮೀತಾ ಪಾಟೀಲ
ಗ್ರಾ.ಪ. ಅಧ್ಯಕ್ಷೆ ಹಿರೇಬಾಗೇವಾಡಿ.

ವಿಶೇಷ ವರದಿ: ಶಿವಾನಂದ ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next