ಹಿರೇಬಾಗೇವಾಡಿ: ಗ್ರಾಮದ ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆ, ಶಿಥಿಲ ಕೊಠಡಿಗಳು ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದು, ದಿಧೀರ್ಘಾವಧಿಯ ಸಮಸ್ಯೆಗಳು ಇನ್ನೂ ಜೀವಂತವಾಗಿರುವುದಕ್ಕೆ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶತಮಾನದ ಇತಿಹಾಸವನ್ನು ಹೊಂದಿರುವ ಇಲ್ಲಿನ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯು ಇಂದು ಭರ್ಜರಿ ಸರ್ಜರಿಯ ನಿರೀಕ್ಷೆಯಲ್ಲಿದೆ. ಇಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಒಂದು ಅಚ್ಚುಕಟ್ಟಾದ ಶೌಚಾಲಯ, ನೀರಿನ ಸೌಕರ್ಯ ಇಲ್ಲ. ಇನ್ನು ಮಳೆಗಾಲ ಬಂತೆಂದರೆ ಸಾಕು, ವಿದ್ಯಾರ್ಥಿಗಳ ಪಾಠಕ್ಕೆ ತೊಂದರೆ ತಪ್ಪಿದ್ದಲ್ಲ. ಕಾರಣ ಇಲ್ಲಿನ 9 ಶಾಲಾ ಕೊಠಡಿಗಳು ಮಳೆಯಲ್ಲಿ ಸೋರುತ್ತವೆ. ಕುಡಿಯುವ ನೀರು ಹಾಗೂ ಅನ್ನದಾಸೋಹ ಕೊಠಡಿಯೂ ಸೇರಿದಂತೆ ಇತರೆ ಮೂಲ ಸೌಕರ್ಯಗಳ ಕೂರತೆ ಇಲ್ಲಿದೆ. ಸರ್ಕಾರದ ಯಾವುದೇ ಯೋಜನೆಗಳು ಬಂದರೂ ಸಹ ಅವು ಈ ಶಾಲೆಗೆ ಲಭ್ಯವಾಗುವುದು ಅಷ್ಟಕ್ಕಷ್ಟೇ ಎಂಬ ಕೊರಗು ಇಲ್ಲಿನ ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರದ್ದು.
ವಿದ್ಯಾರ್ಥಿಗಳಿದ್ದಾರೆ, ಶಿಕ್ಷಕರಿಲ್ಲ!: ಕೋವಿಡ್ ನಂತರದ ಬೆಳಗಣಿಗೆಯಲ್ಲಿ ಪಾಲಕರು ಮತ್ತೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಅಲ್ಲದೆ ಆಂಗ್ಲ ಮಾಧ್ಯಮ ಶಾಲೆಯು ಪ್ರಾರಂಭವಾಗಿದ್ದು, ವರ್ಷದಿಂದ ವರ್ಷಕ್ಕೆ ನಿಧಾನವಾಗಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರೇ ಇಲ್ಲ. ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 172 ವಿದ್ಯಾರ್ಥಿಗಳಿದ್ದು, ಪ್ರಧಾನ ಗುರು ಶಿಕ್ಷಕರು ಸೇರಿದಂತೆ ಕೇವಲ 4 ಶಿಕ್ಷಕರಿದ್ದಾರೆ. ಅದರಲ್ಲೂ ವಿಜ್ಞಾನ, ಗಣಿತ ವಿಷಯ ಶಿಕ್ಷಕರೇ ಇಲ್ಲ. ಶಾಲೆಗೆ ಮಕ್ಕಳನ್ನು ಸೇರಿಸುವ ಪಾಲಕರು ನಂತರ ಶಿಕ್ಷಕರು ಇಲ್ಲದ ಕಾರಣಕ್ಕೆ 15 ಮಕ್ಕಳ ಟಿಸಿ ತೆಗೆದುಕೊಂಡು ಖಾಸಗಿ ಶಾಲೆಗೆ ದಾಖಲಿಸಿದ್ದಾರೆ.
ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ 107 ವಿದ್ಯಾರ್ಥಿನಿಯರಿದ್ದು, ಇಲ್ಲಿಯೂ ಅತಿಥಿ ಶಿಕ್ಷಕರು ಸೇರಿದಂತೆ ಮಾತ್ರ ನಾಲ್ವರು ಶಿಕ್ಷಕರಿದ್ದಾರೆ. ಸರ್ಕಾರ ಶಾಲಾ ಮಕ್ಕಳು, ಶಾಲೆ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಮುಖ್ಯವಾಗಿ ಶಿಕ್ಷಕರೇ ಇಲ್ಲವೆಂದರೆ ಹೇಗೆ? ಶಿಕ್ಷಕರೇ ಇಲ್ಲದ ಶಾಲೆ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಹತಾಶ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ. ವಿಷಯ ಪರಿಣಿತ ಶಿಕ್ಷಕರಿಲ್ಲದೆ ಎಷ್ಟೋ ವರ್ಷಗಳಾಗಿವೆ. ಇದರಿಂದಾಗಿ ವಿಜ್ಞಾನ, ಗಣಿತ ಹಾಗೂ ಆಂಗ್ಲ ವಿಷಯಗಳ ಪರಿಣಾಮಕಾರಿ ಬೋಧನೆಯಿಂದ ಇಲ್ಲಿನ ವಿದ್ಯಾರ್ಥಿಗಳು ನಿತ್ಯ ವಂಚಿತರಾಗುತ್ತಿದ್ದಾರೆ. ಈ ಮೊದಲಿದ್ದ ವಿಷಯ ಪರಿಣಿತ ಶಿಕ್ಷಕ ಹುದ್ದೆ ಎಂದೊ ವಿಲೀನವಾಗಿದ್ದು, ಅತಿಥಿ ಶಿಕ್ಷಕರೂ ಇಲ್ಲದೆ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಮೈದಾನವಿದೆ, ಆದರೆ ಆಟವೇ ಇಲ್ಲ!: ಶತಮಾನದ ಶಾಲೆಗೆ ವಿಶಾಲವಾದ ಆಟದ ಮೈದಾನವಿದೆ. ಆದರೆ ಇಲ್ಲಿ ಮಕ್ಕಳ ಆಟವೇ ನಿಂತು ಹೋಗಿದೆ. ಈ ಹಿಂದೆ ಮಕ್ಕಳ ಕೊರತೆ ಎಂಬ ಕಾರಣದಿಂದಾಗಿ ಇಲ್ಲಿದ್ದ ದೈಹಿಕ ಶಿಕ್ಷಕರ ಹುದ್ದೆ ರದ್ದಾಗಿದೆ. ಇದು ಮಕ್ಕಳ ಬಾಹ್ಯ ಹಾಗೂ ದೈಹಿಕ ಚಟುವಟಿಕೆಗಳ ನಿಲ್ಲುವಿಕೆಗೆ ಮುಖ್ಯ ಕಾರಣವಾಗಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆಗಳನ್ನು ವಿಲೀನಗೊಳಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸೌಲಭ್ಯಗಳನ್ನು ನೀಡಬಹುದು ಎಂಬುದು ಪಾಲಕರ ಹಾಗೂ ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.
ಶಿಕ್ಷಣ ಮಂತ್ರಿಗಳೇ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ವಿಲೀನಗೊಳಿಸಿ ಎಂದು ಹೇಳಿದ್ದಾರೆ. ಹಾಗಾಗಿ ಮಕ್ಕಳ ದಾಖಲಾತಿಯ ತಾಂತ್ರಿಕ ಸಮಸ್ಯೆಗಳಿಗೆ ಮುಕ್ತಿ ನೀಡಲು ಗಂಡು ಹಾಗು ಹೆಣ್ಣು ಮಕ್ಕಳ ಶಾಲೆಗಳನ್ನು ವಿಲೀನಗೊಳಿಸಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕು. –
ಬಸವಣ್ಣಿಪ್ಪ ಗಾಣಗಿ, ರೈತ ಮುಖಂಡರು ಹಾಗೂ ಶಿಕ್ಷಣ ಪ್ರೇಮಿಗಳು
ಶಿಕ್ಷಕರೂ ಸೇರಿದಂತೆ ಇತರೇ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅತಿ ಶೀಘ್ರವೇ ಪಾಲಕರ ಹಾಗೂ ಸರ್ಕಾರಿ ಶಾಲಾ ಶಿಕ್ಷಣ ಪ್ರೇಮಿಗಳ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. –
ಎಂ.ಎಸ್.ಮೇದಾರ,ಕ್ಷೇತ್ರ ಸಮನ್ವಯ ಅಧಿಕಾರಿ ಬೆಳಗಾವಿ ಗ್ರಾಮಾಂತರ ವಲಯ
-ಶಿವಾನಂದ ಮೇಟಿ