Advertisement

ಸಾಗರಕ್ಕೆ ಆಸ್ಟಿನ್‌ ಕಾರಲ್ಲಿ ಬಂದಿದ್ದ ಹಿರಣ್ಣಯ್ಯ!

12:14 PM May 03, 2019 | Team Udayavani |

ಸಾಗರ: ಪ್ರಸಿದ್ಧ ರಂಗನಟ ಮಾಸ್ಟರ್‌ ಹಿರಣ್ಣಯ್ಯ ಅವರು ಬೆಂಗಳೂರಿನಲ್ಲಿ ನಿಧನರಾದ ಸುದ್ದಿ ಗುರುವಾರ ಪ್ರಕಟವಾಗುತ್ತಿದ್ದಂತೆ ನಗರದ ಹಿರಿಯ ರಂಗಾಸಕ್ತರು ಮಾಸ್ಟರ್‌ ಹಿರಣ್ಣಯ್ಯನವರ ಸಾಗರದ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Advertisement

ಒಂದು ಕಾಲದಲ್ಲಿ ಗುಬ್ಬಿ ಕಂಪನಿ, ಚಾಮುಂಡೇಶ್ವರಿ ಕಂಪನಿ ಹಾಗೂ ಹಿರಣ್ಣಯ್ಯ ಮಿತ್ರ ಮಂಡಳಿಯಂತ ದಿಗ್ಗಜ ಮೂರೂ ತಂಡಗಳು ಒಂದೇ ವೇಳೆಯಲ್ಲಿ ಸಾಗರದಲ್ಲಿ ನಾಟಕ ಆಡಿದ್ದವಂತೆ. ಅದರೂ ಮೂರು ನಾಟಕದ ಟೆಂಟ್‌ಗಳು ಹೌಸ್‌ಫುಲ್. ಅವತ್ತಿನ ಸಾಗರದ ಪ್ರೇಕ್ಷಕರ ಹೃದಯ ಶ್ರೀಮಂತಿಕೆ, ಕಲಾಭಿರುಚಿಯನ್ನು ಯಾರಾದರೂ ಊಹಿಸಿಕೊಳ್ಳಬಹುದು ಎಂದು ರಂಗಭೂಮಿಯ ಹಿರಿಯ ಕಲಾವಿದ ನಾಗರಾಜ ರಾಯ್ಕರ್‌ ನೆನಪಿಸಿಕೊಳ್ಳುತ್ತಾರೆ.

ಆ ಕಾಲದಲ್ಲಿ ಬೇಬಿ ಆಸ್ಟಿನ್‌ ಕಾರಿನಲ್ಲಿ ಓಡಾಡುತ್ತ ನಾಟಕ ಆಡುತ್ತಿದ್ದ ಹಿರಣ್ಣಯ್ಯ ಅವರದ್ದು ಬೇರೆಯೇ ರೀತಿ. ಕಾರು ಅಪ್ಪ ಹಿರಣ್ಣಯ್ಯ ಅವರದಾಗಿದ್ದಾಗಿರಬಹುದಾದರೂ ಮಗ ಮಾಸ್ಟರ್‌ ಹಿರಣ್ಣಯ್ಯ ಅವರದೇ ಡ್ರೈವಿಂಗ್‌. ಅಪ್ಪನ ಪರಂಪರೆಯನ್ನು ಮುಂದುವರೆಸಿದ ಮಗ ಮಾಸ್ಟರ್‌ ಹಿರಣ್ಣಯ್ಯ ಸಾಮಾಜಿಕ ನಾಟಕಗಳ ಮೂಲಕ ಸಮಾಜದ ಓರೆಕೋರೆಗಳು ಹಾಗೂ ಮಂತ್ರಿಮಹೋದಯರನ್ನು ತಮ್ಮ ಮಾತಿನಿಂದ ಇರಿಯುತ್ತಿದ್ದರು. ಅವರ ಲಂಚಾವತಾರ, ಚಿರಂಜೀವಿ ಕಳ್ಳಭಟ್ಟಿ ಮುಂತಾದ ನಾಟಕಗಳು ಇದಕ್ಕಾಗಿಯೇ ಹೆಚ್ಚು ಪ್ರಸಿದ್ಧವಾಗಿದ್ದವು ಎಂದು ರಾಯ್ಕರ್‌ ನೆನಪಿನ ಪುಟಗಳನ್ನು ತೆರೆಯುತ್ತಾರೆ.

1958-59ರ ಸುಮಾರಿಗೆ ಸಾಗರದ ಜೊತೆ ಮಾಸ್ಟರ್‌ ಹಿರಣ್ಣಯ್ಯ ಅವರ ಗಾಢ ಸಂಪರ್ಕ ಏರ್ಪಟ್ಟಿತ್ತು. ಪ್ರತಿವರ್ಷ ಸಾಗರದಲ್ಲಿ ಹಿರಣ್ಣಯ್ಯ ಮಿತ್ರಮಂಡಳಿಯ ನಾಟಕಗಳ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿತ್ತು. ಸೂಪರ್‌ ಹಿಟ್ ನಾಟಕಗಳಾದ ಲಂಚಾವತಾರ, ಮಕ್ಮಲ್ ಟೋಪಿ ಮುಂತಾದವುಗಳನ್ನು ನಿರಂತರವಾಗಿ ನೋಡಿದ ಪ್ರೇಕ್ಷಕ ವರ್ಗವಿದೆ. ಕ್ಯಾಸೆಟ್‌ಗಳನ್ನು ಖರೀದಿಸಿ, ನಾಟಕದ ಮಾತುಗಳನ್ನು ಬಾಯಿಪಾಠ ಹಾಕಿ ಗುಂಪುಗಳಲ್ಲಿ ಪ್ರದರ್ಶನ ನೀಡಿ ಸಂತೋಷ ಪಡುತ್ತಿದ್ದ ರಂಗಾಸಕ್ತರು ಇದ್ದಾರೆ. ಸಿ.ಟಿ.ಬ್ರಹ್ಮಚಾರ್‌ ಸೇರಿದಂತೆ ಕೆಲವು ಹವ್ಯಾಸಿ ನಟರು ಹಿರಣ್ಣಯ್ಯ ಅವರ ಜೊತೆ ನಟಿಸಿದ್ದಾರೆ. ಇಲ್ಲಿನ ಎಸ್‌.ಪಿ.ಎಂ. ರಸ್ತೆಯಲ್ಲಿ ಈಗ ಸುವಿಧಾ ಸೂಪರ್‌ ಮಾರ್ಕೆಟ್ ನಡೆಯುತ್ತಿರುವ ಸ್ಥಳದಲ್ಲಿದ್ದ ದ್ವಾರಕಾನಾಥ ಕಲ್ಯಾಣ ಮಂಟಪದಲ್ಲಿ ಹಿರಣ್ಣಯ್ಯ ಮಿತ್ರಮಂಡಳಿಯ ನಾಟಕ ಪ್ರದರ್ಶನಗಳಾಗುತ್ತಿದ್ದವು. ಒಂದು ವರ್ಷ ಧ್ವನಿವರ್ಧಕದ ಸಮಸ್ಯೆ, ಪ್ರತಿಧ್ವನಿಯ ಉಪಟಳ ಹೆಚ್ಚಾಗಿ ಹಿರಣ್ಣಯ್ಯ ತಮ್ಮ ನಾಟಕ ಪ್ರದರ್ಶನಗಳನ್ನು ಕ್ಯಾನ್ಸಲ್ ಮಾಡಿಕೊಂಡು ಹೋದದ್ದನ್ನು ಸಹ ಹವ್ಯಾಸಿ ಕಲಾವಿದ ಮಂಜುನಾಥ ಜೇಡಿಕುಣಿ ನೆನಪಿಸಿಕೊಳ್ಳುತ್ತಾರೆ. ಸಾಗರದ ಭಾಗದಲ್ಲಿ ವಿಶೇಷವಾಗಿ ಮಾವಿನ ಕಾಯಿಯಿಂದ ಮಾಡುವ ಅಪ್ಪೆಕಾಯಿ ತಂಬಳಿಯನ್ನು ಚಪ್ಪರಿಸಿಕೊಂಡು ಮಾಸ್ಟರ್‌ ಹಿರಣ್ಣಯ್ಯ ಮೂರ್‍ನಾಲ್ಕು ಲೋಟ ಕುಡಿಯುತ್ತಿದ್ದುದು ಕೂಡ ಮಾತುಗಳಲ್ಲಿ ಹಾದುಹೋಗುತ್ತದೆ.

1959ರ ಸಮಯದಲ್ಲಿ ಸಾಗರಕ್ಕೆ ನಾಟಕ ಪ್ರದರ್ಶನಕ್ಕಾಗಿ ತಮ್ಮ ಮಿತ್ರಮಂಡಳಿಯ ಜೊತೆಗೆ ಕುಟುಂಬ ಸಮೇತ ಬಂದಿದ್ದ ಹಿರಣ್ಣಯ್ಯ ವರದಪುರದ ಶ್ರೀಧರ ಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡ ಸಂದರ್ಭದ ಕಪ್ಪು ಬಿಳುಪು ಚಿತ್ರವನ್ನು ಬೆಂಗಳೂರಿನ ಶಿವಕುಮಾರ್‌ ಶ್ರೀಧರಾಶ್ರಮದ ವಾಟ್ಸ್‌ಆ್ಯಪ್‌ ಗ್ರೂಪಿನಲ್ಲಿ ಪೋಸ್ಟ್‌ ಮಾಡಿ, ಸಂದರ್ಭ ಸಹಿತ ವಿವರಣೆ ನೀಡಿದ್ದಾರೆ. ಸ್ವಾಮೀಜಿ ಹಿರಣ್ಣಯ್ಯ ಅವರ ಆಹ್ವಾನ ಪಡೆದು ಬೆಂಗಳೂರಿಗೆ ತೆರಳಿದ ಸಂದರ್ಭದಲ್ಲಿ ಅವರ ಸುಭದ್ರಾ ಪರಿಣಯ ನಾಟಕವನ್ನು ನೋಡಿದರು ಹಾಗೂ ನಾಟಕದ ನಂತರ ನಾಟಕ ವೀಕ್ಷಕರಿಗಾಗಿ ರಂಗಭೂಮಿಯಲ್ಲಿಯೇ ಒಂದು ಘಂಟೆಗಳ ಕಾಲ ಪ್ರವಚನ ನೀಡಿದರು ಎಂಬ ಕಥೆಯೂ ಹಲವರ ನೆನಪಿನಲ್ಲಿದೆ.

Advertisement

ಶ್ರೀಧರ ಸ್ವಾಮಿಗಳನ್ನು ತಮ್ಮ ಮನೆಗೆ ಕರೆಸಿ ಪಾದಪೂಜೆ ಮಾಡಿ, ಅವರ ಪಾದದ ಮೇಲೆ ತಮ್ಮ ಹೆಣ್ಣು ಮಗುವನ್ನು ಹಾಕಿ ‘ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಉಳಿಯುವುದಿಲ್ಲ. ನಮ್ಮ ಮನೆಯಲ್ಲಿ ಸಾಯುವುದರ ಬದಲು ನಿಮ್ಮ ಪಾದದ ಮೇಲೆ ಸಾಯಲಿ’ ಎಂದು ಹೇಳಿದರು. ಶ್ರೀಗಳವರು ಮಗುವನ್ನೆತ್ತಿಕೊಂಡು ಹಿರಣ್ಣಯ್ಯನವರ ಪತ್ನಿಯ ಮಡಿಲಿಗೆ ಹಾಕಿ, ‘ಇದು ನಿಮ್ಮ ಮನೆತನದ ಅದೃಷ್ಟದ ಕೂಸು. ಇನ್ನೊಂದು ಹೆಣ್ಣು ಮಗು ಆಗುತ್ತದೆ, ಘಾಟಿ ಸುಬ್ರಹ್ಮಣ್ಯಕ್ಕೆ ಹೋಗಿ ನಾಗಪ್ರತಿಷ್ಠೆ ಮಾಡಿಸಿಕೊಂಡು ಬನ್ನಿ ಸಾಕು’ ಎಂದು ಹೇಳಿದರು.

ಶ್ರೀಗಳವರು ಅಲ್ಲಿಂದ ತೆರಳುವಾಗ ಹಿರಣ್ಣಯ್ಯನವರು ಶ್ರೀಗಳಲ್ಲಿ ಪೂಜೆಗಾಗಿ ಒಂದು ಚರಣಪಾದುಕೆ ನೀಡುವಂತೆ ಕೇಳಿದಾಗ ಶ್ರೀಗಳು ನಕ್ಕು ‘ಬಂಗಾರದ ಪಾದುಕೆ ಮಾಡಿಸಿಕೊಂಡು ಬಾ, ಅನುಗ್ರಹಿಸಿ ಕೊಡುತ್ತೇನೆ’ ಅಂದರು. ‘ಬಂಗಾರದ ಪಾದುಕೆ, ನನ್ನಿಂದಾಗುತ್ತದೆಯೆ, ನನ್ನಲ್ಲೇನಿದೆ ಎಂದು ಹಿರಣ್ಣಯ್ಯನವರು ಸುಮ್ಮನಾದರು. ಮಾರನೇ ದಿನ ‘ದೇವದಾಸಿ’ ನಾಟಕಕ್ಕೆ ಎಂದಿಗಿಂತ ಹೆಚ್ಚು ಜನ ಬಂದಿದ್ದರು. ಶ್ರೀಗಳ ಪಾದಧೂಳಿನ ಮಹಿಮೆಯೇ ಇರಬಹುದೆಂದುಕೊಂಡರು ಹಿರಣ್ಣಯ್ಯನವರು. ಅಂದಿನ ನಾಟಕ ನೋಡಿದ ದಾವಣಗೆರೆಯ ವ್ಯಕ್ತಿಯೊಬ್ಬರು ಬಹುವಾಗಿ ಮೆಚ್ಚಿ, ದಾವಣಗೆರೆಗೆ ಬಂದರೆ ಮೊದಲ ಹತ್ತು ನಾಟಕಗಳನ್ನು ತನಗೇ ಕಂಟ್ರಾಕ್ಟ್ ಕೊಡಬೇಕೆಂದು ಹೇಳಿ ಮುಂಗಡವಾಗಿ ತಮ್ಮ ಕೈಯಲ್ಲಿದ್ದ ಚಿನ್ನದ ಉಂಗುರವನ್ನೇ ತೆಗೆದು ಹಿರಣ್ಣಯ್ಯನವರ ಬೆರಳಿಗೆ ಹಾಕಿಬಿಟ್ಟರು!”. ಆ ಉಂಗುರದಿಂದಲೆ ಪಾದುಕೆ ತಯಾರಿಸಿ ವರದಳ್ಳಿಗೆ ಹೋಗಿ ಗುರುಗಳ ಮುಂದಿಟ್ಟು ನಮಸ್ಕರಿಸಿದಾಗ ಗುರುಗಳು ‘ಬಂಗಾರ ಸಿಗ್ತೀನೋ….ತಮ್ಮಾ….’ ಎಂದು ನಕ್ಕು 14 ದಿನಗಳ ನಂತರ ಬರುವಂತೆ ಹೇಳಿದರು. 14 ದಿನಗಳ ನಂತರ ಹೋದಾಗ ತಮ್ಮ ದಿವ್ಯಾನುಗ್ರಹ ತುಂಬಿದ ಪಾದುಕೆ ನೀಡಿ ಹರಸಿದರು. ಇಂದಿಗೂ ಅದೇ ನನ್ನ ಸರ್ವಸ್ವ ಎನ್ನುತ್ತಿದ್ದರು ಮಾಸ್ಟರ್‌ ಹಿರಣ್ಣಯ್ಯ. ಈ ಕುರಿತ ಹೆಚ್ಚಿನ ಮಾಹಿತಿ ಗುರುಪಾದ ಸಚ್ಚಿದಾನಂದ ಸ್ವಾಮಿ ರಚಿಸಿದ ಸದ್ಗುರು ಶ್ರೀಧರ ಚರಿತ್ರೆಯಲ್ಲಿ ಸವಿವರವಾದ ಚಿತ್ರಣವಿದೆ.

ಅಪ್ಪನ ಪರಂಪರೆಯನ್ನು ಮುಂದುವರೆಸಿದ ಮಗ ಮಾಸ್ಟರ್‌ ಹಿರಣ್ಣಯ್ಯ ಸಾಮಾಜಿಕ ನಾಟಕಗಳ ಮೂಲಕ ಸಮಾಜದ ಓರೆಕೋರೆಗಳು ಹಾಗೂ ಮಂತ್ರಿಮಹೋದಯರನ್ನು ತಮ್ಮ ಮಾತಿನಿಂದ ಇರಿಯುತ್ತಿದ್ದರು. ಅವರ ಲಂಚಾವತಾರ, ಚಿರಂಜೀವಿ ಕಳ್ಳಭಟ್ಟಿ ಮುಂತಾದ ನಾಟಕಗಳು ಇದಕ್ಕಾಗಿಯೇ ಹೆಚ್ಚು ಪ್ರಸಿದ್ಧವಾಗಿದ್ದವು.

ಮಾವೆಂಸ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next