Advertisement

“ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ರಂಗಭೂಮಿ ಬಳಸಿದ ಹಿರಣ್ಣಯ್ಯ’

12:02 AM May 08, 2019 | sudhir |

ಕಾಸರಗೋಡು: ಸಾಮಾಜಿಕ ಪಿಡುಗುಗಳ ವಿರುದ್ಧ ಹಾಗೂ ಆಡಳಿತ ವ್ಯವಸ್ಥೆಗಳ ಸೋಗಲಾಡಿತನವನ್ನು ಬಯಲಿ ಗೆಳೆದು ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಾಸ್ತರ್‌ ಹಿರಣ್ಣಯ್ಯ ಅವರ ರಂಗಭೂಮಿ ದುಡಿಮೆ ನ ಭೂತೋ ನ ಭವಿಷ್ಯತಿ ಎನ್ನುವಂತಿದೆ. ಆಡಳಿತ ಪಕ್ಷಗಳು ತಪ್ಪಿ ನಡೆದಾಗ ಎಚ್ಚರಿಸುವ ವಿರೋಧ ಪಕ್ಷದಂತೆ ಸದಾ ಕಾಲ ಸಾಮಾಜಿಕ ಜಾಗೃತಿಗಾಗಿ ಹಿರಣ್ಣಯ್ಯ ಅವರು ತಮ್ಮ ನಾಟಕಗಳ ಮೂಲಕ ಹೊಸ ಮನ್ವಂತರವನ್ನು ಬರೆದಿದ್ದಾರೆ ಎಂದು ಕಾಸರಗೋಡಿನ ಹಿರಿಯ ರಂಗಕರ್ಮಿ ಸುಬ್ಬಣ್ಣ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಅಪೂರ್ವ ಕಲಾವಿದರು ಇದರ ವತಿಯಿಂದ ಪಾರೆಕಟ್ಟೆ ರಂಗ ಕುಟೀರದಲ್ಲಿ ನಡೆದ ಮಾಸ್ಟರ್‌ ಹಿರಣ್ಣಯ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಣ್ಣಯ್ಯ ಅವರು ಸುದಿಧೀರ್ಘ‌ ಕಾಲ ನಾಟಕ ಹಾಗೂ ಸಿನೆಮಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಪ್ರತಿಭೆ, ದಕ್ಷತೆ, ಕಲಾಪ್ರೇಮ ಹಾಗೂ ಸರಳ ಸಜ್ಜನಿಕೆ ಕನ್ನಡ ರಂಗಭೂಮಿಯನ್ನು ಬೆಳೆಸಿದೆ. ಹಿರಣ್ಣಯ್ಯ ಅವರು ಕಾಸರಗೋಡಿನವರ ಬಗ್ಗೆ ವಿಶೇಷ ಪ್ರೀತಿ ಉಳ್ಳವರಾಗಿದ್ದು, ಎಪ್ಪತ್ತರ ದಶಕದಲ್ಲಿ ಕಾಸರಗೋಡಿಗೆ ಬಂದು ಬಣ್ಣ ಹಚ್ಚಿದ್ದಾರೆ ಎಂದು ಅವರು ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್‌ ಸಾಗರ್‌ ಮಾತನಾಡಿ ಹಿರಣ್ಣಯ್ಯ ಅವರಂತಹ ಪ್ರಾಮಾಣಿಕ ಹಾಗೂ ಬದ್ಧತೆಯಿರುವ ಕಲಾವಿದರನ್ನು ಇನ್ನು ಕಾಣಲು ಅಸಾಧ್ಯ. ತನ್ನ ಜೀವಿತಾವ ಧಿಯಲ್ಲಿ ಸುಮಾರು ಹತ್ತು ಸಾವಿರಕ್ಕಿಂತಲೂ ಮಿಕ್ಕಿ ನಾಟಕಗಳಲ್ಲಿ ಅಭಿನಯಿಸಿರುವ ಅವರ ಸಾಧನೆ ಬಹಳ ದೊಡ್ಡದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪೂರ್ವ ಕಲಾವಿದರು ಅಧ್ಯಕ್ಷ, ಕೇರಳ ತುಳು ಅಕಾಡೆಮಿಯ ಅಧ್ಯಕ್ಷರಾದ ಉಮೇಶ್‌ ಸಾಲಿಯಾನ್‌ ದಶಕಗಳ ಮೊದಲು ನೆರೆಸಂತ್ರಸ್ತರ ಕಣ್ಣೀರೊರೆಸಲು ಬೆಂಗಳೂರಿಗೆ ಮಳೆನಿಂತ ನಾಟಕ ತಂಡ ಹೋದಾಗ ಹಿರಣ್ಣಯ್ಯ ಅವರು ನೀಡಿದ ಪ್ರೋತ್ಸಾಹ ಹಾಗೂ ಬೆಂಬಲವನ್ನು ನೆನಪಿಸಿಕೊಂಡರು.

Advertisement

ಪತ್ರಕರ್ತ, ಕಲಾವಿದ ವಿ.ಜಿ. ಕಾಸರಗೋಡು ಮಾತನಾಡಿ ಹಿರಣ್ಣಯ್ಯನವರು ಸಾಮಾಜಿಕ ತಿದ್ದುಪಡಿಗಾಗಿ ವೇದಿಕೆಯನ್ನು ಆಯುಧ ವಾಗಿಸಿದವರು. ವಿಡಂಬನಾತ್ಮಕ ನಾಟಕವೇ ಮಾಸ್ಟರ್‌ ಅವರ ಹೆಗ್ಗಳಿಕೆಯಾಗಿತ್ತು. ಅವರು ತೋರಿದ ದಾರಿ ಕನ್ನಡ ರಂಗಭೂಮಿಗೆ ಸಿಕ್ಕ ಬಹುದೊಡ್ಡ ಕೊಡುಗೆ ಎಂದರು.
ಬಿ. ಬಾಲಕೃಷ್ಣ ಅಗ್ಗಿತ್ತಾಯ ಮಧೂರು, ವಾಸು ಬಾಯಾರು, ಭಾರತೀಬಾಬು, ಅಶೋಕ್‌ ಕೊಡ್ಲಮೊಗರು, ಉದಯ ಸಾರಂಗ್‌, ಶಶಿಧರ್‌ ಎದ್ರುತ್ತೋಡು, ಸುರೇಶ್‌ ಕೆ, ಕಿರಣ್‌ ಕಲಾಂಜಲಿ ಈ ಮುಂತಾದ ವರು ಮಾತನಾಡಿದರು.
ಡಾ| ರತ್ನಾಕರ ಮಲ್ಲಮೂಲೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉದಯ ಸಾರಂಗ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next