ಚಿಕ್ಕಬಳ್ಳಾಪುರ: ವ್ಯರ್ಥವಾಗುತಿದ್ದ ಮನೆ ಬಳಕೆ ನೀರನ್ನೇ ಬಳಸಿಕೊಂಡು ತಾಲೂಕಿನ ಕುಪ್ಪಳ್ಳಿಯ ರೈತ ಮುನಿಯಪ್ಪ ಹಿಪ್ಪುನೇರಳೆ ಸೊಪ್ಪಿನ ತೋಟ ಬೆಳೆದು ಜಿಲ್ಲೆಯ ಇತರೇ ರೈತರಿಗೆ ಮಾದರಿಯಾಗಿದ್ದು, ಮುನಿಯಪ್ಪ ತೋಟ ಈಗ ಇತರೇ ರೈತರಿಗೆ ಪ್ರಯೋಗಾಲಯ ಶಾಲೆಯಾಗಿ ಪರಿಣಮಿಸಿದೆ.
ವ್ಯರ್ಥ ನೀರು ಸಂಗ್ರಹ: ಎರಡು ವರ್ಷಗಳ ಹಿಂದೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ)ಯೋಜನೆಯಡಿ ತಮ್ಮ ಮಳೆ ಆಶ್ರಿತ 30 ಗುಂಟೆ ಜಮೀನಿನಲ್ಲಿ ಹಿಪ್ಪುನೇರಳೆಯ 330 ಸಸಿಗಳನ್ನು ನಾಟಿ ಮಾಡಿಸಿದರು. ಬೇಸಿಗೆಯಲ್ಲಿ ಮರಗಡ್ಡಿ ಬೆಳೆಸಲು ಮುನಿಯಪ್ಪ ಟ್ಯಾಂಕರ್ ನೀರು ಮೊರೆ ಹೋಗುತ್ತಿದ್ದರು.
ಟ್ಯಾಂಕರ್ ನೀರಿನ ಖರ್ಚು, ಸೊಪ್ಪಿನ ಆದಾಯ ಸರಿ ಹೊಂದದಿರುವುದರಿಂದ ನೀರಿನ ಬಗ್ಗೆ ಪರ್ಯಾಯ ಯೋಚನೆ ಮಾಡುವ ಸಂದರ್ಭದಲ್ಲಿ ತ್ಯಾಜ್ಯ ನೀರಿನ ಬಳಕೆಯ ಚಿಂತನೆ ಮಾಡಿ ತನ್ನ ಮನೆ, ತಟ್ಟೆ, ಪಾತ್ರೆ, ಬಟ್ಟೆ ತೊಳೆದು ವ್ಯರ್ಥವಾಗುವ ನೀರನ್ನು ಸಂಗ್ರಹಿಸಿ ರೇಷ್ಮೆ ಸೊಪ್ಪು ಬೆಳೆಯಲು ನಿರ್ಧರಿಸಿದರು.
ಪ್ರತಿಫಲಕ್ಕೆ ವಿಳಂಬ ಇಲ್ಲ: ಕಳೆದ ಮೂರು ತಿಂಗಳಿಂದ ಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯ ನೀರನ್ನು 20 ಲೀ. ಕ್ಯಾನ್‌ಗಳಿಗೆ ತುಂಬಿಕೊಂಡು ತೋಟದಲ್ಲಿ ಗಿಡಗಳಿಗೆ ಹರಿಸಲು ಮುಂದಾದ ಮುನಿಯಪ್ಪಗೆ ಅದರ ಪ್ರತಿಫಲ ತಿಳಿಯಲು ಹೆಚ್ಚು ದಿನ ಕಾಯಲಿಲ್ಲ.
Advertisement
ಇತ್ತೀಚಿಗೆ ಬಯಲುಸೀಮೆಯಲ್ಲಿ ತೀವ್ರ ಮಳೆ ಕೊರತೆ, ಅಂತರ್ಜಲ ಕುಸಿತದಿಂದ ಕೈಕೊಡುತ್ತಿರುವ ಕೊಳವೆ ಬಾವಿಗಳಿಂದ ಲಕ್ಷಾಂತರ ರೂ. ಬಂಡವಾಳ ಹಾಕಿ ಕೈಸುಟ್ಟುಕೊಳ್ಳುತ್ತಿರುವ ರೈತರು ನೊಂದು ಕೃಷಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಮುನಿಯಪ್ಪ ಕೊಳಚೆ ನೀರನ್ನು ಬಳಸಿ ಹಿಪ್ಪುನೇರಳೆ ಸೊಪ್ಪು ಬೆಳೆದಿದ್ದಾರೆ.
Related Articles
Advertisement
ಹನಿ ನೀರಾವರಿ ಮಾದರಿಯಲ್ಲಿ ಗಿಡಗಳಿಗೆ ನೀರುಣಿಸಿದರೆ ಇನ್ನೂ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಅರಿತು ಖಾಲಿ ಯಾದ ಕುಡಿಯುವ ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಗಿಡ ಗಳಿಗೆ ಬುಡಕ್ಕೆ ಕಟ್ಟಿ ಅವುಗಳಿಗೆ ನೀರು ತುಂಬಿಸಿದರು. ಹೀಗಾಗಿ ಮುನಿಯಪ್ಪ ಪ್ರಯೋಗ ಯಶಸ್ಸು ಕಂಡು ಈಗ 30 ಗುಂಟೆ ಜಮೀನಲ್ಲಿ ಹಿಪ್ಪುನೇರಳೆ ಸೊಪ್ಪು ಸಾಕಷ್ಟು ಇಳುವರಿ ಜೊತೆಗೆ ಗುಣಮಟ್ಟದ ಸೊಪ್ಪು ಬೆಳೆದಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯ ಹನಿ ಹನಿ ನೀರಿಗೂ ಹಾಹಾಕಾರ ಎದುರಾಗಿ ರೈತರು ಲಕ್ಷಾಂತರ ರೂ. ವೆಚ್ಚ ಮಾಡಿ ಹಾಕಿಸುತ್ತಿ ರುವ ಕೊಳವೆ ಬಾವಿಗಳು ವಿಫಲವಾಗಿ ಕೃಷಿ ಚಟುವಟಿಕೆಗಳಿಂದ ದೂರ ಸರಿಯುತ್ತಿರುವ ಸಂದರ್ಭದಲ್ಲಿ ಕುಪ್ಪಳ್ಳಿಯ ರೈತ ಮುನಿಯಪ್ಪ ತನ್ನ ಅಲ್ಪ ಜಮೀನಿನಲ್ಲಿ ತ್ಯಾಜ್ಯ ನೀರು ಬಳಸಿ ಕೊಂಡು ರೇಷ್ಮೆ ಸೊಪ್ಪು ಬೆಳೆದಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ.
ಸಮೃದ್ಧ ಇಳುವರಿ
ಎರಡು ವರ್ಷದ ಹಿಂದೆ ಹಳ್ಳದ ನೀರು ತಂದು ತೋಟಕ್ಕೆ ಹಾಕುತ್ತಿದ್ದೆ. ಈಗ ಹಳ್ಳ ಕೂಡ ಒಣಗಿದೆ. 1,500ರಿಂದ 1,900 ಅಡಿ ಆಳಕ್ಕೆ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗುವುದು ಖಚಿತವಿಲ್ಲ. ಹಿಡುವಳಿ ಬೇರೆ ಚಿಕ್ಕದು. ನೀರಿಗಾಗಿ ಏನು ಮಾಡೋಣ ಎಂದು ಯೋಚಿಸುತ್ತಿದ್ದಾಗ ವ್ಯರ್ಥವಾಗುತ್ತಿದ್ದ ಮನೆ ಬಳಕೆ ನೀರು ಗಮನಕ್ಕೆ ಬಂತು. ಪ್ರತಿ ದಿನ ಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯ ನೀರನ್ನು ಬಳಸಿಕೊಂಡು ಹೀಪ್ಪು ನೇರಳೆ ಸೊಪ್ಪು ಬೆಳೆದಿದ್ದೇನೆ. ಇಳುವರಿ ಕೂಡ ಚೆನ್ನಾಗಿ ಬಂದಿದೆ ಎಂದು ಮುನಿಯಪ್ಪ ಸಂತಸದಿಂದ ನುಡಿದರು.