ಬನಹಟ್ಟಿ : ಹಿಪ್ಪರಗಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರ ಬಿಟ್ಟ ಪರಿಣಾಮವಾಗಿ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮಕ್ಕೆ ಕೃಷ್ಣಾ ನದಿಯ ನೀರು ನುಗ್ಗಿದ್ದು, ಗ್ರಾಮದ ಇಂಚಗೇರಿ ಸಂಪ್ರದಾಯದ ಸಂಗಮೇಶ್ವರದ ಮಠವನ್ನು ಸುತ್ತುವರೆದಿದ್ದು, ಕರ್ತು ಗದ್ದುಗೆಯಲ್ಲಿ ನೀರು ತುಂಬಿಕೊಂಡಿದೆ.
ಕೆಲದಿನಗಳ ಹಿಂದೆ ಗ್ರಾಮದ ತಗ್ಗು ಪ್ರದೇಶಗಳಿಗೆ ಮಾತ್ರ ನೀರು ನುಗ್ಗಿತ್ತು ಈಗ ಸಂಗಮೇಶ್ವರ ಮಠದ ಸುತ್ತಮುತ್ತ ನೀರು ಸುತ್ತುವರೆದಿದ್ದು ಇನ್ನೂ ಹೆಚ್ಚಾದಲ್ಲಿ ಆವರಣವು ಕೂಡಾ ಜಲಾವೃಗೊಳ್ಳಲಿದೆ. ಇದು ಗ್ರಾಮಸ್ಥರಲ್ಲಿ ಮತ್ತೋಮ್ಮೆ ಮಹಾ ಪ್ರವಾಹದ ಆತಂಕವನ್ನುಂಟುಮಾಡಿದೆ.
ಅದೇ ರೀತಿಯಾಗಿ ಸಮೀಪದ ಶ್ರೀ ಜಗದ್ಗುರು ಪಂಚಾಚಾರ್ಯ ಪ್ರೌಢ ಶಾಲೆ ಸಂಪೂರ್ಣವಾಗಿ ನೀರಿನಲ್ಲಿ ನಿಂತಿದ್ದರೆ. ತೆಗ್ಗು ಪ್ರದೇಶದ ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ದಿನದಿಂದ ದಿನಕ್ಕೆ ನೀರು ಹೆಚ್ಚಾಗುತ್ತಿರುವುದರಿಂದ ಜಲಾಶಯದ ಪಕ್ಕದಲ್ಲಿರುವ ಗ್ರಾಮದ ಜನತೆ ಭಯಭೀತರಾಗಿದ್ದಾರೆ. ಜಲಾವೃತಗೊಂಡಿರುವ ಮನೆಗಳಲ್ಲಿ ವಾಸವಿರುವ ಜನರನ್ನು ತಾಲ್ಲೂಕು ಆಡಳಿತ ಬೇರೆ ಕಡೆಗೆ ಸ್ಥಳಾಂತರಿಸುತ್ತಿದೆ.
ಸದ್ಯ ಶೇ. 30 ರಷ್ಟು ಹಿಪ್ಪರಗಿ ಜಲಾವೃತವಾಗಿದ್ದು, ನಾಳೆ ನೀರಿನ ಪ್ರಮಾಣ ಇನ್ನೂ ಹೆಚ್ಚಾದರೆ ಬಹುತೇಕ ಎರಡು ವರ್ಷಗಳ ಹಿಂದೆ ಬಂದಂತಹ ಮಟ್ಟಕ್ಕೆ ತಲುಪಬಹುದು ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು.
ಸ್ಥಳಕ್ಕೆ ತಹಶೀಲ್ದಾರ್ ಸಂಜಯ ಇಂಗಳೆ, ಗ್ರೇಡ್-2 ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ನೋಡಲ್ ಅಧಿಕಾರಿ ಎನ್.ಎಂ.ದಿವಟೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದರು.