ಬಾಗಲಕೋಟೆ: ಉತ್ತರ ಕರ್ನಾಟಕದ ಜೀವಜಲ ಕೃಷ್ಣೆಯ ಒಡಲಲ್ಲಿ ಈಗ ನೀರಿನ ಆತಂಕ ತೀವ್ರವಾಗಿದೆ. ಬೆಳಗಾವಿ-ಬಾಗಲಕೋಟೆ ಜಿಲ್ಲೆಗಳ ಐದು ತಾಲೂಕಿನ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿದ್ದ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್ (ಚಿಕ್ಕ ಡ್ಯಾಂ) ಸಂಪೂರ್ಣ ಖಾಲಿಯಾಗಿದೆ. ಹೀಗಾಗಿ ಮಹಾರಾಷ್ಟ್ರದ ಕೊಯ್ನಾ ನೀರಿನತ್ತ ಮುಖ ಮಾಡುವ ಪರಿಸ್ಥಿತಿ ಬಂದೊದಗಿದೆ.
ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ ನಗರ-ಪಟ್ಟಣಗಳು, ಬೆಳಗಾವಿ ಜಿಲ್ಲೆಯ ಕುಡಚಿ, ಅಥಣಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಗೆ ಜಲಮೂಲವೇ ಹಿಪ್ಪರಗಿ ಬ್ಯಾರೇಜ್. ಈ ಬಾರಿ ಡೆಡ್ ಸ್ಟೋರೇಜ್ ನೀರೂ ಸದ್ಯ ಖಾಲಿಯಾಗಿದೆ. ಜಮಖಂಡಿ ತಾಲೂಕು ಹಿಪ್ಪರಗಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಹಿಪ್ಪರಗಿ ಡ್ಯಾಂ 524.87 ಮೀಟರ್ ಎತ್ತರವಿದ್ದು, 6.1 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ.
0.8 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ಇದೆ. ಆದರೆ, ಈ ಬಾರಿ ನೀರಿನ ತೀವ್ರ ಅಭಾವದಿಂದ ಡೆಡ್‌ಸ್ಟೋರೇಜ್‌ನಲ್ಲಿದ್ದ ನೀರನ್ನೂ ಪೈಪ್ ಅಳವಡಿಸಿ ಮೇಲೆತ್ತಲಾಗಿದೆ. ಹೀಗಾಗಿ ಸದ್ಯ ಸಂಪೂರ್ಣ ಖಾಲಿಯಾಗಿದೆ. ಕಳೆದ ವರ್ಷ ಇದೇ ದಿನ ಈ ಡ್ಯಾಂನಲ್ಲಿ 0.8 ಟಿಎಂಸಿ ಅಡಿ (ಡೆಡ್ ಸ್ಟೋರೇಜ್) ನೀರಿತ್ತು.
ಬಾಗಲಕೋಟೆ ಜಿಲ್ಲೆಯ ಮೂರು ಹಾಗೂ ಬೆಳಗಾವಿ ಜಿಲ್ಲೆಯ ಎರಡು ತಾಲೂಕು ಸಹಿತ, ಎರಡು ಜಿಲ್ಲೆಗಳ ಸುಮಾರು 95ಕ್ಕೂ ಹೆಚ್ಚು ಹಳ್ಳಿಗಳಿಗೆ ಇದೇ ಡ್ಯಾಂನಿಂದ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಇದೆ. ಐದು ತಾಲೂಕು ಕೇಂದ್ರದ ನಗರ-ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಯ ಪ್ರತ್ಯೇಕ ಯೋಜನೆಗಳಿವೆ.
ಅಲ್ಲದೇ ಸುಮಾರು 15 ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಇದೇ ಡ್ಯಾಂನ ನೀರೇ ಆಧಾರ. ಆದರೆ, ಕಳೆದ ನಾಲ್ಕು ದಿನಗಳಿಂದ ಬ್ಯಾರೇಜ್ ಸಂಪೂರ್ಣ ಖಾಲಿಯಾಗಿದ್ದು, ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿ ಮೂಲಕ, ಹಿಪ್ಪರಗಿ ಜಲಾಶಯಕ್ಕೆ ನೀರು ಬಿಡಿಸಬೇಕೆಂಬ ಒತ್ತಡ ಕೇಳಿ ಬಂದಿದೆ.
ಹಿಪ್ಪರಗಿ ಜಲಾಶಯ ಸಂಪೂರ್ಣ ಖಾಲಿಯಾಗಿದ್ದು, ಕೂಡಲೇ ಕೊಯ್ನಾದಿಂದ ಕೃಷ್ಣಾ ನದಿಗೆ 5 ಟಿಎಂಸಿ ನೀರು ಬಿಡಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಮಹಾರಾಷ್ಟ್ರ ಸರ್ಕಾರ ಶೀಘ್ರವೇ ನೀರು ಬಿಡುವ ವಿಶ್ವಾಸವಿದೆ.
-ಆನಂದ ನ್ಯಾಮಗೌಡ, ಜಮಖಂಡಿ ಶಾಸಕ
ಹಿಪ್ಪರಗಿ ಜಲಾಶಯಕ್ಕೆ ನೀರು ಬಿಡಿಸುವ ವಿಷಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮೂಲಕ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಾತನಾಡಿದ್ದೇವೆ. ನಮ್ಮ ಮನವಿಗೆ ಅವರೂ ಸ್ಪಂದಿಸಿದ್ದು, ನೀರು ಬಿಡಲು ಸಮ್ಮತಿಸಿದ್ದಾರೆ.
-ಮುರಗೇಶ ನಿರಾಣಿ, ಬೀಳಗಿ ಶಾಸಕ
* ಶ್ರೀಶೈಲ ಕೆ. ಬಿರಾದಾರ