ಅಹಮದಾಬಾದ್: ಹಿಂದುತ್ವವೇ ನಮ್ಮ ಉಸಿರು ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು ನಾವು ಹಿಂದುತ್ವವನ್ನು ಬಿಟ್ಟು ಬದುಕಿಸಲು ಸಾಧ್ಯವಿಲ್ಲ ಎಂದು ಶಿವ ಸೇನಾ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಗುಜರಾತ್ ನ ಗಾಂಧಿನಗರದಲ್ಲಿ ಬಿಜೆಪಿ ರಾಷ್ಟ್ರೀಯಅಧ್ಯಕ್ಷ ಅಮಿತ್ ಶಾರ ನಾಮಪತ್ರ ಸಲ್ಲಿಕೆಯ ರೋಡ್ ಶೋನಲ್ಲಿ ಮಾತನಾಡಿದರು.
ನನ್ನ ತಂದೆ (ಬಾಳ್ ಠಾಕ್ರೆ) ಪ್ರತಿಯೊಂದು ಕೆಲಸವನ್ನು ಹೃದಯದಿಂದ ಮಾಡುವಂತೆ ಕಲಿಸಿಕೊಟ್ಟಿದ್ದಾರೆ. ಬಿಜೆಪಿ ಮತ್ತು ಶಿವ ಸೇನಾ ಮಧ್ಯೆ ಭಿನ್ನಾಭಿಪ್ರಾಯಗಳಿತ್ತು ಆದರೆ ಈಗ ಎಲ್ಲವನ್ನೂ ಪರಿಹರಿಸಿಕೊಂಡಿದ್ದೇವೆ ಎಂದರು.
ವಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ ಶಿವ ಸೇನಾ ಮುಖ್ಯಸ್ಥ, ನಮಗೆ ಎದುರಾಳಿಯಾಗಿ 56 ವಿರೋಧ ಪಕ್ಷಗಳು ಕೈ ಎತ್ತಿವೆ. ಆದರೆ ಅವರೆಲ್ಲರ ಕೈ ಒಂದಾಗಿಲ್ಲ. ನಮಗೆ ಒಬ್ಬನೇ ನಾಯಕ. ಆದರೆ ಅವರ ನಾಯಕ ಯಾರು? ಯಾರು ಅವರ ಮುಂದಿನ ಮುಖ್ಯಮಂತ್ರಿ? ಎಂದು ಪ್ರಶ್ನಿಸಿದರು.
ಬಿಜೆಪಿ ಮತ್ತು ಶಿವಸೇನಾ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ 25 ಕ್ಷೇತ್ರಗಳು ಮತ್ತು ಶಿವಸೇನಾ 23 ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸಲಿವೆ.