ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ದೇವಾಲಯ ಬಾಗಿಲು ತೆರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಸಮರ, ವಾಕ್ಸಮರ ತಾರಕಕ್ಕೇರಿದೆ.
ಮಹಾರಾಷ್ಟ್ರದಾದ್ಯಂತ ದೇವಾಲಯಗಳನ್ನು ತೆರೆಯುವಂತೆ ರಾಜ್ಯಪಾಲ ಕೋಶ್ಯಾರಿ ಅವರು ಸಿಎಂ ಉದ್ಧವ್ ಠಾಕ್ರೆಗೆ ಬರೆದಿದ್ದ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದರು.
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ ನಿಂದ ದೇವಾಲಯಗಳ ಬಂದ್ ಮುಂದುವರಿದಿದೆ. ಆದರೆ ದಿಲ್ಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಮಾತ್ರ ಯಾಕೆ ದೇವಾಲಯ ತೆರೆಯಲು ವಿಳಂಬ ಮಾಡುತ್ತಿರುವುದು ಯಾಕೆ? ಎಂದು ರಾಜ್ಯಪಾಲರು ಠಾಕ್ರೆಗೆ ಬರೆದಿರುವ ಪತ್ರದಲ್ಲಿ ಪ್ರಶ್ನಿಸಿದ್ದರು.
ನೀವು ದೇವಾಲಯಗಳನ್ನು ತೆರೆಯುವ ವಿಚಾರ ಮುಂದೂಡುತ್ತಿರುವುದಕ್ಕೆ ಯಾವುದಾದರು ಪವಿತ್ರ ಮುನ್ಸೂಚನೆ ಪಡೆದಿದ್ದೀರಾ? ಅಥವಾ ನೀವು ದಿಢೀರ್ ಆಗಿ ಜಾತ್ಯತೀತರಾಗಿ ಬದಲಾಗಿಬಿಟ್ಟಿದ್ದೀರಾ ಎಂದು ಕೋಶ್ಯಾರಿ ಪ್ರಶ್ನಿಸಿದ್ದರು.
ಇದನ್ನೂ ಓದಿ:ಏಳು ತಿಂಗಳ ಬಳಿಕ ಕೇವಲ ಓರ್ವ ಪ್ರವಾಸಿಗನಿಗಾಗಿ ಪ್ರಸಿದ್ಧ ಮಾಚು ಪೀಚು ಪ್ರವಾಸಿ ತಾಣ ಓಪನ್!
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಠಾಕ್ರೆ, ನನಗೆ ಯಾರಿಂದಲೂ ಹಿಂದುತ್ವದ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ತಿಳಿಸಿದ್ದರು. ಅಲ್ಲದೇ ಕಂಗನಾ ರನೌತ್ ವಿವಾದವನ್ನು ಕೂಡಾ ಠಾಕ್ರೆ ಪ್ರಸ್ತಾಪಿಸಿದ್ದರು.
“ಇಡೀ ದೇಶಾದ್ಯಂತ ಏಕಾಏಕಿ ಲಾಕ್ ಡೌನ್ ಘೋಷಿಸಿದ್ದು ಸರಿಯಾದ ಕ್ರಮವಲ್ಲ. ಅಲ್ಲದೇ ಏಕಾಏಕಿ ಎಲ್ಲಾ ನಿರ್ಬಂಧ ತೆರವುಗೊಳಿಸುವುದು ಕೂಡಾ ಒಳ್ಳೆಯದಲ್ಲ. ಬೇರೆಯವರು ಹಿಂದುತ್ವ ಅನುಸರಿಸುತ್ತಾರೆ. ಆದರೆ ನನ್ನ ಹಿಂದುತ್ವದ ಬಗ್ಗೆ ನಿಮ್ಮ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಠಾಕ್ರೆ ಪತ್ರದಲ್ಲಿ ತಿರುಗೇಟು ನೀಡಿದ್ದಾರೆ.
ರಾಜ್ಯಾದ್ಯಂತ ಭಕ್ತರಿಗಾಗಿ ದೇವಾಲಯಗಳನ್ನು ತೆರೆಯಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿಯೇ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವೆ ಈ ಪತ್ರ ಸಮರ ನಡೆದಿರುವುದು ಗಮನಾರ್ಹವಾಗಿದೆ. ಮುಂಬೈನಲ್ಲಿನ ಪ್ರಸಿದ್ಧ ಸಿದ್ದಿವಿನಾಯಕ ದೇವಸ್ಥಾನದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಮುಖಂಡ ಪ್ರಸಾದ್ ಲಾಡ್ ಸೇರಿದಂತೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ:ಬಿಹಾರ ಚುನಾವಣೆ: ನಿತೀಶ್ ಸೋಲಿಸಲು ತಂತ್ರ-ಒವೈಸಿ, ಕುಶ್ವಾಹ ಜಾತಿ ಲೆಕ್ಕಾಚಾರ ಹೀಗಿದೆ…
ಶಿರ್ಡಿ ಸಾಯಿ ಬಾಬಾ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳ ಬಾಗಿಲು ತೆರೆಯುವಂತೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಸಂದರ್ಭದಲ್ಲಿ ದೇವಾಲಯದ ಒಳಗೆ ಪ್ರವೇಶಿಸಲು ಯತ್ನಿಸಿದ್ದರು. ಆದರೆ ಭಾರೀ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿದ್ದರಿಂದ ದೇವಾಲಯದ ಒಳಪ್ರವೇಶಿಸುವುದನ್ನು ತಡೆಯಲಾಗಿತ್ತು ಎಂದು ವರದಿ ಹೇಳಿದೆ.