Advertisement

ಮೆರೆದ ಕೋಮಲರಿಷಭ ಅಸಾವರಿ ತೋಡಿ

07:12 PM Sep 05, 2019 | mahesh |

ರಂಜನಿ ಮೆಮೋರಿಯಲ್‌ ಟ್ರಸ್ಟ್‌ ಈ ವರ್ಷ ಮೇ ತಿಂಗಳಿನಿಂದ ತಿಂಗಳಿಗೊಂದು ಕಾರ್ಯಕ್ರಮವನ್ನು ಲತಾಂಗಿಯಲ್ಲಿ ಆಯೋಜಿಸುತ್ತಾ ಬಂದಿದೆ. ಈ ಬಾರಿ ಆ.15ರಂದು ಅನಿರುದ್ಧ ಐತಾಳ ಇವರಿಂದ ಹಿಂದೂಸ್ಥಾನಿ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಬೆಳಗ್ಗೆಯೇ ಅಪರೂಪದ ಮಧುರ ರಾಗಗಳನ್ನು ಕೇಳುವ ಅವಕಾಶ ದೊರಕಿತು.

Advertisement

ಕುಂದಾಪುರ ಮೂಲದ ಅನಿರುದ್ಧ ಐತಾಳ್‌ ಇನ್ನೂ ವಿದ್ಯಾರ್ಥಿ. ಚಿಕ್ಕ ವಯಸ್ಸಿನಲ್ಲೇ ಸಂಗೀತ ಅಭ್ಯಾಸ ಮಾಡಿ ಸುಲಲಿತವಾಗಿ ಹಾಡಬಲ್ಲ ಪ್ರತಿಭಾವಂತ ಕಲಾವಿದ. ವಾಡಿಕೆಗಿಂತ ಮೇಲಿನ ಶ್ರುತಿಯಲ್ಲಿ ಹಾಡುವ ಇವರ ಸಣ್ಣ ಸಣ್ಣ ಕುಸುರಿ ಕೆಲಸಗಳು ಹಾಗೂ ಅತಿ ಧೃತ್‌ ಗತಿಯ ತಾನ್‌ಗಳು ಬಹು ಸ್ಪಷ್ಟ. ಈಗಾಗಲೇ ಹಲವಾರು ಹೆಸರಾಂತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿ ಉತ್ತಮ ಕಲಾವಿದನಾಗಿ ರೂಪುಗೊಳ್ಳುವ ಭರವಸೆಯನ್ನು ಮೂಡಿಸಿದ್ದಾರೆ. ಕಛೇರಿಯಲ್ಲಿ ಮೊದಲಿಗೆ ರಾಗ ಕೋಮಲ ರಿಷಭ ಅಸಾವರಿಯನ್ನು ಆಯ್ದುಕೊಂಡಿದ್ದರು. ಇದರಲ್ಲಿ ಲಂಬಿತ್‌ ಏಕ್‌ತಾಲ್‌ನಲ್ಲಿ ರಬ ಮೆ ರವೊ ಎಂಬ ಪಾರಂಪಾರಿಕ ಬಂದಿಶ್‌ ಹಾಗೂ ಧೃತ್‌ನಲ್ಲಿ ಕಾಜ ಕೀಜಿಯೆ ಎಂಬ ಪಂಡಿತ್‌ ಪುಟ್ಟರಾಜ ಗವಾಯಿಗಳು ರಚಿಸಿದ ಬಂದಿಶ್‌ನ್ನು ಪ್ರಸ್ತುತ ಪಡಿಸಿದರು. ಅನಂತರ ರಾಗ ದೇಸಿಯಲ್ಲಿ ಮಧ್ಯಲಯ ತೀನ್‌ತಾಲ್‌ನಲ್ಲಿ ಬಂದಿಶ್‌ ಒಂದನ್ನು ಹಾಡಿದರು. ಬಳಿಕ ರಾಗ ದೇಸ್‌ಕಾರ್‌ನಲ್ಲಿ, ಪ್ರಸಿದ್ಧವಾದ ಹೂತೊ ತೋರೆ ಕಾರನ ಎಂಬ ರಚನೆಯನ್ನು ಹಾಡಿದರು. ತುಂಬಾ ವಿರಳವಾಗಿ ಕೇಳ ಸಿಗುವ ಕೆಲವು ಕನ್ನಡ ರಂಗಗೀತೆಗಳನ್ನು, ಅವುಗಳ ಸಂದರ್ಭವನ್ನೂ ತಿಳಿಸಿ ಸುಂದರವಾಗಿ ಹಾಡಿದರು. ಮರಾಠಿ ನಾಟ್ಯಸಂಗೀತವನ್ನು ಹಾಡುವ ಪರಿಪಾಠ ಎಲ್ಲಾ ಕಡೆ ಇದೆಯಾದರೂ ಕನ್ನಡ ರಂಗಗೀತೆಗಳು ಅಷ್ಟು ಜನಪ್ರಿಯತೆಯನ್ನು ಪಡೆದಿಲ್ಲ. ಈ ನಿಟ್ಟಿನಲ್ಲಿ, ಅನಿರುದ್ಧ ಅವರು ಇಟ್ಟ ಹೆಜ್ಜೆ ಸ್ತುತ್ಯರ್ಹವಾದದ್ದು. ವಚನ ಹಾಗೂ ಅಭಂಗವೊಂದನ್ನು ಹಾಡಿ, ನಂತರ ಭೈರವಿಯಲ್ಲಿ ಕನ್ನಡ ಹಾಡಿನೊಂದಿಗೆ ಮುಕ್ತಾಯಗೊಳಿಸಿದರು.ಹಾರ್ಮೋನಿಯಂನಲ್ಲಿ ಸತೀಶ್‌ ಭಟ್‌ ಹೆಗ್ಗಾರ ಹಾಗೂ ತಬಲಾದಲ್ಲಿ ಶ್ರೀದತ್ತ ಎಂ.ಜಿ. ಸಾಥ್‌ ನೀಡಿದರು.

ಶ್ರೀಮತಿದೇವಿ, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next