Advertisement

ಹಿಂದೂಸ್ತಾನಿ ಶಾಲೆಯ ಅಂಗನವಾಡಿಗೆ ಕಟ್ಟಡ, ಶೌಚಾಲಯ ಇಲ್ಲ !

04:48 PM May 07, 2019 | sudhir |

ಬೈಂದೂರು: ಸರಕಾರ ಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿಗೇನೋ ಹಲವು ಯೋಜನೆಗಳನ್ನು ರೂಪಿಸುತ್ತದೆ. ಆದರೆ ಇದರ ಬಗ್ಗೆ ಮುತುವರ್ಜಿ ಇಲ್ಲದೆ ಕೆಲಸಗಳು ನಡೆದಿಲ್ಲ. ಶಿರೂರು ಹಿಂದೂಸ್ತಾನಿ ಶಾಲೆಯ ಕಟ್ಟಡದಲ್ಲಿರುವ ಅಂಗನವಾಡಿ ಇದಕ್ಕೊಂದು ಸಾಕ್ಷಿ.

Advertisement

ಕಟ್ಟಡ, ಶೌಚಾಲಯ ಇಲ್ಲ!
ಕೆಲವು ಅಂಗನವಾಡಿಗಳು ಸೂಕ್ತ ಸವಲತ್ತುಗಳಿಲ್ಲದೆ ಕಾಟಾಚಾರಕ್ಕೆ ನಡೆಸುವಂತ ಪರಿಸ್ಥಿತಿ ಇದೆ. ಶಿರೂರು ಗ್ರಾ.ಪಂ ವ್ಯಾಪ್ತಿಯ ಹಿಂದೂಸ್ತಾನಿ ಶಾಲಾ ಆವರಣದಲ್ಲಿರುವ ಅಂಗನವಾಡಿ 2016ರಲ್ಲಿ ಆರಂಭವಾಗಿದೆ. ಪ್ರಸ್ತುತ 12ರಿಂದ 13 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಶಾಲೆ ಮುಚ್ಚಿದೆ.

ಬಯಲು ಶೌಚ
ಅಂಗನವಾಡಿಗೆ ಸ್ಥಳ ಇಲ್ಲದ್ದರಿಂದ ಜನಪ್ರತಿನಿಧಿಯೊಬ್ಬರ ಮನವಿ ಮೇರೆಗೆ ಒಂದು ಕೊಠಡಿಯನ್ನು ಶಿಕ್ಷಣ ಇಲಾಖೆ ನೀಡಿದೆ. ಇದೇ ಕೊಠಡಿಯಲ್ಲಿ ಮ್ಕಕಳ ಆಹಾರ, ಅಂಗನವಾಡಿ ಪರಿಕರ, ದಾಖಲೆ ಎಲ್ಲವನ್ನೂ ಇಟ್ಟುಕೊಳ್ಳಬೇಕಾಗಿದೆ. ಇಲ್ಲಿ ಹೆಗ್ಗಣಗಳ ನಡುವೆ ಮಕ್ಕಳಿಗೆ ಆರೋಗ್ಯಕರ ಆಹಾರ ನೀಡುವುದು ಇಲ್ಲಿನ ಕಾರ್ಯಕರ್ತೆಯರಿಗೆ ಸವಾಲಾಗಿ ಪರಿಣಮಿಸಿದೆ. ಇದರೊಂದಿಗೆ ಶೌಚಾಲಯ ವ್ಯವಸ್ಥೆಯಿಲ್ಲ. ಪುಟಾಣಿಗಳು ಬಯಲು ಶೌಚವನ್ನೇ ಮಾಡಬೇಕಾಗಿದೆ.

ಜಾಗ, ಕಟ್ಟಡಕ್ಕೆ ಮೀನಮೇಷ
ಅಂಗನವಾಡಿ ಆರಂಭಿಸುವ ವೇಳೆ ಸ್ಥಳೀಯರು ಜಾಗ ಕೊಡುವ ಭರವಸೆ ನೀಡಿದ್ದರೂ ಯಾರೂ ಈ ಬಗ್ಗೆ ಆಸಕ್ತಿ ವಹಿಸಿಲ್ಲ. ಹೀಗಾಗಿ ಅಂಗನವಾಡಿ ಪರಿಸ್ಥಿತಿ ಅಡಕತ್ತರಿಯಲ್ಲಿದೆ. ಸ್ವಂತ ಜಾಗವಿಲ್ಲದ್ದರಿಂದ ದಾನಿಗಳೂ ಯಾವುದೇ ಕೊಡುಗೆ ನೀಡದ ಪರಿಸ್ಥಿತಿ ಇದೆ. ಹೀಗಾಗಿ ಸ್ಥಳೀಯ ಗ್ರಾಮ ಪಂಚಾಯತ್‌ ಈ ಬಗ್ಗೆ ಗಮನಹರಿಸಿ ಇಲ್ಲಿನ ಅಂಗನವಾಡಿಗೊಂದು ಜಾಗ ಮತ್ತು ಸ್ವಂತ ಕಟ್ಟಡ ನೀಡಬೇಕಾಗಿದೆ.ಇಲ್ಲವಾದಲ್ಲಿ ಅಂಗನವಾಡಿಯೊಂದು ಬಾಗಿಲು ಮುಚ್ಚುವ ಸಾಧ್ಯತೆಯಿದೆ.

ಸರಕಾರಿ ಜಾಗ ಇಲ್ಲ
ಹಿಂದೂಸ್ತಾನಿ ಶಾಲೆಯ ಅಂಗನವಾಡಿ ಸಮೀಪ ಯಾವುದೇ ಸರಕಾರಿ ಜಾಗ ಇಲ್ಲದಿರುವುದರಿಂದ ಪಂಚಾಯತ್‌ನಿಂದ ಸ್ಥಳ ನೀಡಲು ಸಾಧ್ಯವಿಲ್ಲ. ಕೆಆರ್‌ಐಡಿಎಲ್‌ ವತಿಯಿಂದ ಶೌಚಾಲಯ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಖಾಸಗಿಯವರು ಜಾಗ ನೀಡಲು ಮುಂದಾದಲ್ಲಿ ಕಟ್ಟಡ ನಿರ್ಮಾಣಕ್ಕೆ ಪಂಚಾಯತ್‌ ಸಹಕಾರ ನೀಡಲಿದೆ.
-ಮಂಜುನಾಥ ಶೆಟ್ಟಿ, ಪಿಡಿಒ, ಶಿರೂರು ಗ್ರಾ.ಪಂ.

Advertisement

ಅತೀ ಅಗತ್ಯ
ಶಾಲೆ ಆರಂಭಿಸುವ ವೇಳೆ ಸ್ಥಳೀಯರು ಅಂಗನವಾಡಿ ಕಟ್ಟಡಕ್ಕೆ ಜಾಗ ನೀಡುವ ಭರವಸೆ ನೀಡಿದ್ದರು. ಹಲವು ಬಾರಿ ಈ ಬಗ್ಗೆ ಪ್ರಸ್ತಾವಿಸಿದರೂ ಸಹ ಯಾರು ಕೂಡ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಶೌಚಾಲಯ ಇಲ್ಲ, ಆಹಾರ ದಾಸ್ತಾನು
ಇಡಲೂ ಸಮಸ್ಯೆಯಿದೆ. ಹೀಗಾಗಿ ಅಂಗನವಾಡಿ
ಕಟ್ಟಡ ಅತೀ ಅಗತ್ಯವಾಗಿ ನಿರ್ಮಾಣವಾಗಬೇಕಿದೆ.
-ಗಂಗಾ ಬಿಲ್ಲವ, ಅಂಗನವಾಡಿ ಕಾರ್ಯಕರ್ತೆ

– ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next