ಮುಂಬಯಿ, ಮಾ. 3: ಕರ್ನಾಟಕ ಸಂಘದ ಕಲಾ ವೇದಿಕೆ ಕಲಾಭಾರತಿಯಲ್ಲಿ ಭವಾನಿ – ಮೀರ್‌ಮಿರಾ ಪರಿವಾರದ ಪ್ರಯೋಜಕತ್ವದಲ್ಲಿ ಲಕ್ಷ್ಮೀ ಸುಧೀಂದ್ರ ಇವರ ಸ್ಮರಣಾರ್ಥ ಫೆ. 19ರಂದು ಬೆಳಗ್ಗೆ 10.30ಕ್ಕೆ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಿದು ಡಾ|ಅಶ್ವಿನಿ ಭಿಡೆ – ದೇಶಪಾಂಡೆ ಅವರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಕಿಕ್ಕಿರಿದ ರಸಿಕ ಶ್ರೋತೃವೃಂದದ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.
ಡಾ| ಅಶ್ವಿನಿ ಅವರು ತಮ್ಮ ಹಾಡುಗಾರಿಕೆಯನ್ನು ಮೊದಲಿಗೆ “ಬೈರಾಗಿ ತೋಡಿ’ ರಾಗದಲ್ಲಿ “ಚರಣಧ್ಯಾನ ಗುರುಜನ ಅಪಾರ’ ಎಂಬ ವಿಲಂಬಿತ ಬಂದಿಶನ್ನು ವಿಸ್ತೃತವಾಗಿ ಹಾಡಿ, “ಲಗನಲಾಗಿ’ ಎಂಬ ದ್ರುತ ಬಂದಿಶನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮುಂದೆ “ಬೃಂದಾವನ ಸಾರಂಗ’ದಲ್ಲಿ “ಬನ ಬನ ಬಸಂತ’ ಎಂಬ ಬಂದಿಶನ್ನು ಬಹಳ ಸೊಗಸಾಗಿ ಹಾಡಿದರು. ಅನಂತರ ‘ಶ್ಯಾಮ ರಂಗ ಖೇಲತ ಹೋರಿ’ ಎಂಬ ಪಾರಂಪರಿಕ ಹೋಲಿ ಗೀತೆಯನ್ನು ಸಾದರೀಕರಿಸಿ ಕೊನೆಗೆ ಪ್ರೇಮಿಗಳ ಮಿಲನ ಸಂಕೇತದ ಲೋಕಗೀತೆಯನ್ನು ‘ಭೈರವಿ’ ಯಲ್ಲಿ ಮುಕ್ತಾಯಗೊಳಿಸಿದರು.
ಡಾ| ಅಶ್ವಿನಿ ಅವರಿಗೆ ತಬಲಾದಲ್ಲಿ ಪಂಡಿತ ವಿಶ್ವನಾಥ್ ಶಿರೋಡ್ಕರ್ ಮತ್ತು ಸಂವಾದಿನಿಯಲ್ಲಿ ಸೀಮಾ ಶಿರೋಡ್ಕರ್ ಅವರು ಸಾಥ್ ನೀಡಿದರು. ಕುಮಾರಿ ಸ್ವರಾಂಗಿ ಮರಾಠೆ ಹಾಗೂ ಋತುಜಾ ಲಾಡ್ ಶಿಷ್ಯೆಯರು ಅಶ್ವಿನಿ ಅವರಿಗೆ ತಾನ್‌ಪುರಾ ಮತ್ತು ಸ್ವರ ಸಾಥ್ ಅನ್ನು ಸಮರ್ಪಕವಾಗಿ ನೀಡಿ ಸಹಕರಿಸಿದರು.
ವಿದು ಅಶ್ವಿನಿ ಅವರನ್ನು ಸುಧಾ ಮಾಧವ ಜೋಶಿ ಅವರು ಸತ್ಕರಿಸಿದರೆ, ಪಂಡಿತ ವಿಶ್ವನಾಥ್ ಅವರನ್ನು ಪಂಡಿತ ಬಾಲಕೃಷ್ಣ ಅಯ್ಯರ್ ಮತ್ತು ಸೀಮಾ ಅವರನ್ನು ಗಾಯಕಿ ಸುನೀತಾ ಟಿಕಾರೆ ಸಮ್ಮಾನಿಸಿದರು. ಆಶಾ ಪುರಂದರ್ ಅವರು ಋತುಜಾ ಲಾಡ್ ಮತ್ತು ಸ್ವರಾಂಗಿ ಮರಾಠೆ ಅವರನ್ನು ಸತ್ಕರಿಸಿದರು.
ಡಾ| ಸುಧೀಂದ್ರ ಭವಾನಿ ಅವರು ಗಾಯಕ ವೃಂದವನ್ನು ಮತ್ತು ಸಮಸ್ತ ರಸಿಕ ಕೇಳುಗರನ್ನು ಹಾರ್ದಿಕವಾಗಿ ಸ್ವಾಗತಿಸಿ, ವಂದನಾರ್ಪಣೆಗೈದರು. ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.