ಗುಳೇದಗುಡ್ಡ: ಛತ್ರಪತಿ ಶಿವಾಜಿ ಈ ದೇಶದಲ್ಲಿ ಜನಿಸದಿದ್ದರೆ ದೇಶದಲ್ಲಿ ದೇವಾಲಯಗಳು, ಮಠಗಳು ಇರುತ್ತಿರಲಿಲ್ಲ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಪಟ್ಟಣದ ಗಚ್ಚಿನಕಟ್ಟಿ ಬಯಲಿನಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಛತ್ರಪತಿ ಶಿವಾಜಿ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ತಾಯಂದಿರು ಶಿವಾಜಿ ಅವರಂತೆ ಮಕ್ಕಳನ್ನು ಬೆಳೆಸಬೇಕು ಎಂದರು. ಕಿತ್ತೂರ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್ ಮೊದಲಾದ ಮಹಾಪುರುಷರನ್ನು ಜಾತಿಯ ಚೌಕಟ್ಟಿನಲ್ಲಿ ಕೂಡ್ರಿಸಬೇಡಿ. ಅವರ ಹೋರಾಟ, ತತ್ವ, ಸಿದ್ದಾಂತಗಳನ್ನು ಪಾಲಿಸಿ. ಹಿಂದುಗಳಿಗೆ ಇರುವುದೊಂದೇ ಭಾರತ ದೇಶ. ಅನ್ಯ ಧರ್ಮದವರಿಗೆ ಜಗತ್ತಿನಲ್ಲಿ ಸಾಕಷ್ಟು ದೇಶಗಳಿವೆ. ಹಿಂದು ದೇಶ ಉಳಿಸಲು ಎಲ್ಲರೂ ಸಂಘಟಿತರಾಗುವ ಕಾಲ ಈಗ ಮತ್ತೇ ಬಂದಿದೆ ಎಂದು ಪ್ರಮೋದ ಮುತಾಲಿಕ್ ಹೇಳಿದರು.
ಈ ಹಿಂದೆ ನಾವು ಇರಾನ್, ಇರಾಕ್, ಅಫಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾ ಕಳೆದುಕೊಂಡಿದ್ದೇವೆ. ಇನ್ನು ಮುಂದೆ ಇಂಚು ಜಾಗ ಕಳೆದುಕೊಳ್ಳೋದಿಲ್ಲ. ಈಗ ಮೋದಿ, ಯೋಗಿಯಂತಹ ದೇಶಭಕ್ತರೇ ಬಂದಿದ್ದಾರೆ. ದೇಶ ಭಕ್ತಿ, ಹಿಂದೂತ್ವ ಕೆಣಕಬೇಡಿ, ಹಗುರವಾಗಿ ತೆಗೆದುಕೊಳ್ಳಬೇಡಿ. ಇನ್ನು ಮುಂದೆ ಅಂಥವರಿಗೆ ಉಳಿಗಾಲವಿಲ್ಲ. ಎಲ್ಲಿಯವರೆಗೆ ಮುಸ್ಲಿಂರು ಸಂವಿಧಾನ ಗೌರವಿಸುವುದಿಲ್ಲವೋ, ಗೋಹತ್ಯೆ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ನಾವು ನಿಮ್ಮೊಂದಿಗೆ ವ್ಯಾಪಾರ ವಹಿವಾಟು ಮಾಡುವುದಿಲ್ಲ ಎಂದು ಸ್ವಾಭಿಮಾನದಿಂದ ಎಲ್ಲರೂ ಹೇಳಬೇಕಾಗಿದೆ ಎಂದರು.
ಸಿದ್ದರಾಮಯ್ಯನವರ ಬಗ್ಗೆ ನನಗೆ ಅಪಾರ ಗೌರವವಿದೆ. ಐದು ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ಆಡಳಿತ ನೀಡಿದ ಮುಖ್ಯಮಂತ್ರಿ ಎಂಬ ಹೆಸರಿದೆ. ನೀವು ಮುಂದಿನ ಬಾರಿ ಇಲ್ಲಿಂದ ಸ್ಪರ್ಧಿಸಬೇಡಿ. ನಿಮಗೆ ಕೇವಲ ಮುಸ್ಲಿಮರು ಮಾತ್ರ ಓಟು ಹಾಕಿಲ್ಲ. ಕೇಸರಿ ಶಾಲು ಎಸೆಯುತ್ತಿರಿ, ಕುಂಕುಮ ಹಚ್ಚಲು ಬಂದರೆ ಅದನ್ನು ಅಳಿಸಿಕೊಳ್ಳುತ್ತೀರಿ, ಹಿಂದುತ್ವದ ವಿಷಯ ಬಂದಾಗ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ಕೇಸರಿ ಬಟ್ಟೆ ಯಾವ ಜಾತಿಯದಲ್ಲ, ಬಿಜೆಪಿಯದಲ್ಲ, ಆರ್‌ಎಸ್‌ಎಸ್‌ದಲ್ಲ ಅಥವಾ ಇನ್ನಾವುದೋ ಪಕ್ಷದ ಸಂಕೇತವಲ್ಲ. ಅದು ಹಿಂದೂ ಧರ್ಮದ ಪ್ರತೀಕ. ಸಿದ್ಧರಾಮಯ್ಯನವರೇ ನಿಮ್ಮಲ್ಲೂ ರಾಮನಿದ್ದಾನೆ ಎಂದರು.
ಅಭಿನವ ಕಾಡಸಿದ್ದೇಶ್ವರ ಶ್ರೀ, ಅಮರೇಶ್ವರ ಮಠದ ಡಾ| ನೀಲಕಂಠ ಶಿವಾಚಾರ್ಯ ಶ್ರೀ, ಮಹೇಶ್ವರ ಶ್ರೀ ಮಾತನಾಡಿದರು. ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ, ಸಂಜಯ ಕಾರಕೂನ, ವಸಂತಸಾ ದೊಂಗಡೆ, ರಾಜು ಗೌಡರ, ಭುವನೇಶ ಪೂಜಾರ, ಚಿಕ್ಕನರಗುಂದ, ಶಿವು ಬಾದೋಡಗಿ, ಮಣಿಕಂಠ ಯಣ್ಣಿ, ರಂಗಪ್ಪ ವಾಲಿಕಾರ ಸೇರಿದ್ದರು.