ನವದೆಹಲಿ: “ಬಾಬ್ರಿ ಮಸೀದಿಯಿದ್ದ ಸ್ಥಳವೇ ರಾಮನ ಜನ್ಮಸ್ಥಳ ಎಂದು ಹಿಂದೂಗಳು ನಂಬಿಕೆ ಇಟ್ಟಿದ್ದರಿಂದ ಮಸೀದಿಯಲ್ಲಿ ಹಿಂದೂಗಳೂ ಪ್ರಾರ್ಥನೆ ಸಲ್ಲಿಸುತ್ತಿದ್ದರು. 1855ರಲ್ಲಿ ಮಸೀದಿ ಪ್ರವೇಶ ನಿರ್ಬಂಧವಾದ ನಂತರ, ಹಿಂದೂಗಳು ಮಸೀದಿ ಪಕ್ಕದಲ್ಲೇ “ರಾಮ್ ಚಬೂತರಾ’ ಎಂಬ ಪ್ರಾರ್ಥನಾ ಸ್ಥಳ ನಿರ್ಮಿಸಿದ್ದರು’ ಎಂಬ ಸುಪ್ರೀಂ ಕೋರ್ಟ್‌ನ ಅನಿಸಿಕೆಯನ್ನು ಮುಸ್ಲಿಂ ಸಂಘಟನೆಗಳು ತೀವ್ರ ವಾಗಿ ಟೀಕಿಸಿವೆ.
1855ರಲ್ಲಾಗಲೀ, ಅದಕ್ಕೂ ಹಿಂದೆಯಾಗಲೀ ಬಾಬ್ರಿ ಮಸೀದಿಯೊಳಗೆ ಹಿಂದೂಗಳ ಪ್ರವೇಶವೇ ಇರಲಿಲ್ಲ. ಹಾಗಾಗಿ, ಸುಪ್ರೀಂಕೋರ್ಟ್‌ನ ಅಭಿಪ್ರಾಯ, ಅಪೂರ್ಣ ಮಾಹಿತಿಗಳನ್ನು ಆಧರಿಸಿ ಮಾಡಿ ಕೊಂಡ ಕಲ್ಪನೆಯಷ್ಟೇ ಎಂದು ಅವು ಹೇಳಿವೆ.
ನ್ಯಾಯಪೀಠ ಹೇಳಿದ್ದೇನು?: ರಾಮಜನ್ಮಭೂಮಿ ಪ್ರಕರಣದ ಬುಧವಾರದ (ಸತತ 26ನೇ ದಿನ) ಕಲಾಪದಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಪೀಠ, “”1855ರಲ್ಲಿ ಹಿಂದೂ- ಮುಸ್ಲಿಂ ಗಲಾಟೆಯಾದ ಹಿನ್ನೆಲೆಯಲ್ಲಿ, ಬ್ರಿಟಿಷ್ ಸರಕಾರ ಅಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಹಿಂದೂಗಳು ಮಸೀದಿಯೊಳಗೆ ಬಾರದಂತೆ ತಡೆಯಿತು. ಆಗ, ಹಿಂದೂಗಳು ಮಸೀದಿ ಪಕ್ಕದಲ್ಲೇ ರಾಮ್ ಚಬುತರಾ ಎಂಬ ಸ್ಥಳವನ್ನು ನಿರ್ಮಿಸಿ ಪೂಜೆಗೆ ಮುಂದಾದರು. ಮಸೀದಿಯು ರಾಮನ ಜನ್ಮಸ್ಥಳ ಎಂಬ ಭಾವನೆ ಇದ್ದಿದ್ದರಿಂದ ತಾನೇ ಇದೆಲ್ಲಾ ಆಗಿದ್ದು” ಎಂದು ಮುಸ್ಲಿಂ ಸಂಘಟನೆಗಳ ಪರ ವಕೀಲರ ರಾಜೀವ್ ಧವನ್‌ರನ್ನು ಪ್ರಶ್ನಿಸಿತ್ತು.
“ಅಸಲಿಗೆ, ಮಸೀದಿಯಿದ್ದ ಜಾಗದಲ್ಲೇ ರಾಮನು ಹುಟ್ಟಿದ್ದ ಎಂಬ ಭಾವನೆ ಹಿಂದೂಗಳಲ್ಲಿ ಇದ್ದದ್ದರಿಂದಲೇ ಅಲ್ಲವೇ, ಅಲ್ಲಿಗೆ ಹಿಂದೂಗಳು ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದುದು? ಹಾಗೆ ಆಗುತ್ತಿದ್ದರಿಂದಲ್ಲವೇ 1855ರಲ್ಲಿ ಗಲಾಟೆ ಆಗಿದ್ದು? ಗಲಾಟೆಯಾಗಿದ್ದರಿಂದಲೇ ಬ್ರಿಟಿಷ್ ಸರಕಾರ ಮಸೀದಿಯೊಳಗೆ ಹಿಂದೂಗಳು ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಿದ್ದಿದ್ದು? 1855ರಲ್ಲಿ ಗಲಾಟೆಯಾಗಿರುವ ಬಗ್ಗೆ ದಾಖಲೆಗಳು ಹೇಳುತ್ತವೆ. ರಾಮ ಚಬೂತರಾ ಕೂಡ 1855ರಲ್ಲೇ ಸೃಷ್ಟಿಯಾದ ಬಗ್ಗೆ ಇತಿಹಾಸ ಹೇಳುತ್ತದೆ.
ತರ್ಕಬದ್ಧವಾಗಿ ನೋಡಿದರೆ, ಮಸೀದಿಯಲ್ಲಿ ರಾಮನ ಜನ್ಮಸ್ಥಳವು ಇದೆ ಎಂಬ ಭಾವನೆ ಅಂದಿನ ಹಿಂದೂಗಳಿಗೆ ಇದ್ದಿದ್ದರಿಂದಲೇ ತಾನೇ ಇಷ್ಟೆಲ್ಲಾ ಆಗಲು ಕಾರಣ’ ಎಂದು ಸುಪ್ರೀಂ ಕೋರ್ಟ್, ಧವನ್ ಅವರನ್ನು ಕೇಳಿತ್ತು.