ಹೊಸದಿಲ್ಲಿ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ವೈರಸ್ ಇದ್ದಂತೆ ಎಂದು ಹೇಳಿ ತೀವ್ರ ವಿವಾದಕ್ಕೆ ಕಾರಣವಾಗಿದ್ದರು. ಇದೀಗ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ, ಹಿಂದೂ ಧರ್ಮವಲ್ಲ, ಅದೊಂದು ವಂಚನೆ, ಕೆಲವರಿಗೆ ಜೀವನೋಪಾಯದ ಮಾರ್ಗ ಎಂದು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, “ಹಿಂದೂ ಧರ್ಮ ಅನ್ನುವುದು ಒಂದು ಮೋಸ, 1955ರಲ್ಲಿ ಸರ್ವೋಚ್ಚ ನ್ಯಾಯಾಲಯ ಹಿಂದೂ ಒಂದು ಧರ್ಮವಲ್ಲ, ಜೀವನಪದ್ಧತಿ ಎಂದು ಹೇಳಿತ್ತು. ಹಿಂದೂ ಅನ್ನುವುದು 200 ಧರ್ಮಗಳ ಒಂದು ಒಕ್ಕೂಟ. ಮೋಹನ್ ಭಾಗವತ್, ಮೋದಿಯೂ ಹಿಂದೂ ಒಂದು ಧರ್ಮವಲ್ಲ ಎಂದಿದ್ದಾರೆ. ಕೆಲವರಿಗೆ ಇದು ಜೀವನಾಧಾರ’ ಎಂದರು.
ಎಸ್‌ಪಿ ನಾಯಕ ಮೌರ್ಯ ತುಳಸಿದಾಸರ ರಚನೆಯ ರಾಮಚರಿತ ಮಾನಸದಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲೆ ಆಕ್ಷೇಪಾರ್ಹ ಭಾಷೆ ಬಳಕೆ ಮಾಡಲಾಗಿದೆ ಎಂದಿದ್ದರು. ಜತೆಗೆ ನಾಲ್ಕು ಕೈಗಳನ್ನಿಟ್ಟುಕೊಂಡು ಲಕ್ಷ್ಮೀ ದೇವಿ ಹೇಗೆ ಜನಿಸಲು ಸಾಧ್ಯ? ಲಕ್ಷ್ಮೀಯನ್ನು ಪೂಜಿಸುವ ಬದಲು ನಿಮ್ಮ ಪತ್ನಿಯರನ್ನು ಗೌರವಿಸಿ ಎಂದಿದ್ದರು.
ಈಗ ನಾವು ಅವರನ್ನು ನಿರ್ಲಕ್ಷಿಸಬೇಕಾಗಿದೆ. ಅವರನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಬೆಂಬಲಿಸಿ, ಬೆಳೆಸುತ್ತಿದ್ದಾರೆ.
ನರೇಂದ್ರ ಕಶ್ಯಪ್, ಉ.ಪ್ರ. ಬಿಜೆಪಿ ಒಬಿಸಿ ಮೋರ್ಚಾ ಮುಖ್ಯಸ್ಥ