Advertisement

ಹಿಂದೂ ಧರ್ಮದ ರಕ್ಷಣೆ ಕರ್ತವ್ಯವಾಗಲಿ;ಸಿದ್ಧಲಿಂಗ

05:41 PM Sep 15, 2021 | Team Udayavani |

ಜೇವರ್ಗಿ: ಧರ್ಮ ಉಳಿದರೆ ರಾಷ್ಟ್ರ ಉಳಿಯುತ್ತದೆ, ರಾಷ್ಟ್ರ ಉಳಿದರೆ ಮಾತ್ರ ಪ್ರಜೆಗಳು ಉಳಿಯಲು ಸಾಧ್ಯ. ಆದ್ದರಿಂದ ಹಿಂದೂ ಧರ್ಮ ರಕ್ಷಣೆ ನಮ್ಮ ಕರ್ತವ್ಯವಾಗಬೇಕು ಎಂದು ಆಂದೋಲಾ ಕರುಣೇಶ್ವರ ಮಠದ ಪೀಠಾ ಧಿಪತಿ, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಶಾಂತನಗರ ಕ್ರಾಸ್‌ ಬಳಿ ಶ್ರೀರಾಮಸೇನೆ ಸಂಘಟನೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಐದು ದಿನಗಳ ಗಣೇಶ ವಿಸರ್ಜನಾ ನಿಮಿತ್ತ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.

ಧರ್ಮವನ್ನು ರಕ್ಷಿಸಿದರೇ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಜೀವನದಲ್ಲಿ ಧರ್ಮ ಪಾಲನೆ ಮಾಡುವುದು ಮುಖ್ಯ. ಹಿಂದೂ ಧರ್ಮ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಪ್ರತಿಯೊಬ್ಬರಿಗೂ ಅವರ ಧರ್ಮ ಪಾಲಿಸಲು ಅವಕಾಶ ನೀಡುತ್ತದೆ. ನಾವೇ ಮೊದಲು ಯಾರನ್ನೂ ಕೆಣಕುವುದಿಲ್ಲ, ಯಾವುದೇ ಧರ್ಮದ ಮೇಲೆ ಆಕ್ರಮಣ ಸಹ ಮಾಡುವುದಿಲ್ಲ. ಆದರೆ, ನಮ್ಮ ಧರ್ಮದ ಮೇಲೆ ಆಕ್ರಮಣವಾದರೇ ಮಾತ್ರ ಬಿಡುವುದಿಲ್ಲ ಎಂದರು.

ವಿಶ್ವದಲ್ಲಿಯೇ ಹಿಂದೂ ಧರ್ಮ ಅತ್ಯಂತ ಹಳೆಯ ಹಾಗೂ ಪವಿತ್ರ ಧರ್ಮವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮವನ್ನು ತುಳಿಯಲಾಗುತ್ತಿದೆ. ಬುದ್ಧಿ ಜೀವಿಗಳು, ಪ್ರಗತಿಪರರು ಸೇರಿ ಹಿಂದೂ ಸಂಘಟನೆಗಳನ್ನು ದುರ್ಬಲಗೊಳಿಸಲು ಯತ್ನಿಸುತಿದ್ದಾರೆ. ಮೂಢನಂಬಿಕೆ ಆಚರಣೆ ವಿರೋಧದ ಹೆಸರಿನಲ್ಲಿ ಸನಾತನ ಧರ್ಮದ ನಂಬಿಕೆಗಳಿಗೆ ಕೊಳ್ಳಿ ಇಡಲಾಗುತ್ತಿದೆ. ಹೀಗಾಗಿ, ಯುವ ಜನಾಂಗ ಹಾಗೂ ಸಂತರು ಹಿಂದೂ ಧರ್ಮದ ಉಳಿವಿಗಾಗಿ ಹೋರಾಡಬೇಕು ಎಂದರು.

ಪ್ರಸಕ್ತ ವರ್ಷ ಕೊರೊನಾ ಮೂರನೇ ಅಲೆ ಭೀತಿಯಿಂದ ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, 21 ದಿನದ ಬದಲು 5 ದಿನಗಳಲ್ಲಿಯೇ ಗಣೇಶ ವಿಸರ್ಜನೆ ಮಾಡಲಾಗಿದೆ. ಬರುವ ವರ್ಷ ಅದ್ಧೂರಿಯಾಗಿ ಗಣೇಶೋತ್ಸವ ಆಚರಣೆ ಮಾಡಲಾಗುವುದು ಎಂದು ಹೇಳಿದರು.

Advertisement

ನಂತರ ಸರಳವಾಗಿ ಗಣೇಶ ಮೂರ್ತಿಯನ್ನು ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ಬಳಿಯ ಭೀಮಾನದಿಯಲ್ಲಿ ವಿಸರ್ಜಿಸಲಾಯಿತು. ಬಿಜೆಪಿ ಹಿರಿಯ ಮುಖಂಡ ರಮೇಶಬಾಬು ವಕೀಲ, ವಿಎಚ್‌ಪಿ ಮುಖಂಡ ಮಲ್ಲಿಕಾರ್ಜುನ ಆದವಾನಿ, ಶ್ರೀರಾಮಸೇನೆ ಸಂಘಟನೆ ಜಿಲ್ಲಾ ಉಪಾದ್ಯಕ್ಷ ಈಶ್ವರ ಹಿಪ್ಪರಗಿ, ತಾಲೂಕು ಘಟಕದ ಅದ್ಯಕ್ಷ ನಿಂಗಣ್ಣಗೌಡ ಪಾಟೀಲ ರಾಸಣಗಿ, ಕಿರಣ ಪಾಟೀಲ ಚನ್ನೂರ, ಸಿದ್ದು ನಾಯ್ಕೋಡಿ, ಅನಿಲ ಪವಾರ, ಸುನೀಲ ಗುತ್ತೇದಾರ, ನಿಂಗಣ್ಣ ಗುತ್ತೇದಾರ, ಚಿದಾನಂದ ಭಾವಿಮನಿ, ಸಿದ್ಧು ಮಾವನೂರ, ನಾಗರಾಜ ರಾಸಣಗಿ, ವಿನೋದ ರಾಸಣಗಿ, ಆಕಾಶ ಬಣಮಿ, ಬಸವರಾಜ ಹುಗ್ಗಿ ಹಾಗೂ ಶ್ರೀರಾಮಸೇನೆ ಸಂಘಟನೆ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next