Advertisement

ದೇವತಾರಾಧನೆಯ ಮಾಸ ಜ್ಯೇಷ್ಠ ಮಾಸ –ಶ್ರೇಷ್ಠ ಮಾಸ!

11:17 PM Jun 10, 2021 | Team Udayavani |

ಹಿಂದೂ ಪಂಚಾಂಗದನ್ವಯ ಮಾಸಗಳಲ್ಲಿ ಮೂರನೆಯದು ಜ್ಯೇಷ್ಠ ಮಾಸ. ಪಾಡ್ಯದಿಂದ ಹುಣ್ಣಿಮೆ ತನಕ, ಪ್ರತಿಯೊಂದು ದಿನವೂ ಪವಿತ್ರ ದಿನ. ಈ ಮಾಸ ದೇವತಾರಾಧನೆಯ ಮಾಸ. ವಿಷ್ಣುಸಹಸ್ರನಾಮದಲ್ಲಿ ವಿಷ್ಣುವನ್ನು ಜ್ಯೇಷ್ಠ ಶ್ರೇಷ್ಠ ಪ್ರಜಾಪತಿಃ ಎಂದು ಸ್ತುತಿಸಲಾಗಿದೆ. ಭಗವಾನ್‌ ವಿಷ್ಣುವು ಪರಮೋತ್ಛ ಬ್ರಹ್ಮ. ಅವನೇ ಚತುರ್ಮುಖ ಬ್ರಹ್ಮನ ಸೃಷ್ಟಿಕರ್ತ. ಆದ್ದರಿಂದ ವಿಷ್ಣು, ಪ್ರಜಾಪತಿ ಎಂದೆನಿಸಿದ್ದಾನೆ. ಅವನು ಉತ್ತಮರಲ್ಲಿ ಅತ್ಯುತ್ತಮನು. ಶ್ರೇಷ್ಠನು. ಜ್ಯೇಷ್ಠ ಮಾಸದ ಮಾಸ ನಿಯಾಮಕ ತ್ರಿವಿಕ್ರಮರೂಪೀ ವಿಷ್ಣುವೇ. ವೇದದಲ್ಲಿ ಗಣಪತಿಯನ್ನು ಜ್ಯೇಷ್ಠರಾಜ ಎಂದು ವರ್ಣಿಸಲಾಗುತ್ತದೆ. ಗಣಾನಾಂತ್ವಾ ಗಣಪತಿಂ…..  ಶ್ರೀಸೂಕ್ತದಲ್ಲಿ ಜ್ಯೇಷ್ಠಾಂ ಅಲಕ್ಷೀಂ… ಎಂಬ ಶ್ಲೋಕದಲ್ಲೂ ಜ್ಯೇಷ್ಠ ಶಬ್ದವನ್ನು ಕಾಣುತ್ತೇವೆ. ಹಿರಿಯ, ಪ್ರಾಚೀನ, ಮೊದಲು ಜನಿಸಿದ ಎಂದರ್ಥ. ಅಂತೆಯೇ ಜ್ಯೇಷ್ಠ ಮಾಸ ಪವಿತ್ರ, ಅದು ಶ್ರೇಷ್ಠ ಮಾಸ. ಶ್ರೀವಿಷ್ಣುಪಾದೋದ್ಭವಿ ಗಂಗೆ, ಭೂಮಿಯಲ್ಲಿ ಅವತರಣವಾದ ದಿನ – ಗಂಗಾವತರಣ ಅಥವಾ ಭಾಗೀರಥಿ ಜಯಂತಿ. ಗಂಗಾಜಯಂತಿ. ಜ್ಯೇಷ್ಠ ಶುಕ್ಲ ದಶಮಿ ದಿವಸ. ಜ್ಯೇಷ್ಠ ಶುಕ್ಲ ದ್ವಾದಶೀ ಗಂಗಾವತರಣದ ದಿವಸ ಎಂದು ಧರ್ಮಸಿಂಧುವಿನ ಉಲ್ಲೇಖ.

Advertisement

ದಶಪಾಪಹರಣ ವ್ರತ :

ಯಾವುದು ದಶಪಾಪಗಳು? ಇತರರ ಸೊತ್ತುಗಳನ್ನು ಅನುಮತಿಯಿಲ್ಲದೆ ಸ್ವೀಕರಿಸುವುದು, ಶಾಸ್ತ್ರ ವಿರೋಧೀ ಹಿಂಸಾಕೃತ್ಯಗಳನ್ನು ಮಾಡುವುದು, ಪರಸ್ತ್ರೀ ಮೋಹ, ಇವಿಷ್ಟು ಕಾಯಿಕ, ಪರುಷ ಭಾಷಣ ಅಥವಾ ಅಹಿತಕರ ಭಾಷೆ, ಸುಳ್ಳು, ಗೊಡ್ಡುಹರಟೆ, ಇತ್ಯಾದಿ ವಾಚಕ. ಪರದ್ರವ್ಯ ಭಿಲಾಷೆ, ಇತರರನ್ನು ನೋವು ಮಾಡುವ ಯೋಚನೆ ಅಥವಾ ಕೃತ್ಯ, ಸ್ವಪ್ರತಿಷ್ಠೆ ಇತ್ಯಾದಿ ಮಾನಸಿಕ ಪಾಪಗಳು. ಜ್ಯೇಷ್ಠ ಮಾಸದ ಮೊದಲ ಹತ್ತು ದಿವಸಗಳಲ್ಲಿ ದಶಪಾಪಹರಣ ವ್ರತವನ್ನು ಕೈಗೊಳ್ಳಲಾಗುತ್ತದೆ. ಶುಕ್ಲ ಪ್ರಥಮ – ಪಾಡ್ಯದಿಂದ ಶುಕ್ಲ ದಶಮಿಯವರೆಗೆ. –

ಜ್ಯೇಷ್ಠ ಮಾಸೇ ಸಿಥೇ ಪಕ್ಷೇ ದಶಮ್ಯಾಂ, ಬುಧ ಹಸ್ತಯೋ ವ್ಯಾತೀಪತೇ ಗರಾನಂದೇ ಕನ್ಯಾ ಚಂದ್ರೇ ವೃಷೌ ರಾವೇ… ಜ್ಯೇಷ್ಠ ಮಾಸದ ಶುಕ್ಲಪಕ್ಷ, ದಶಮೀ ತಿಥಿ, ಬುಧವಾರ, ಹಸ್ತಾ ನಕ್ಷತ್ರ, ವ್ಯಾತೀಪತ ಯೋಗ, ಗರಜಿ ಕರಣ, ಆನಂದ ಯೋಗ ಚಂದ್ರ ಕನ್ಯಾರಾಶಿಯಲ್ಲಿ, ಸೂರ್ಯ ವೃಷಭ ರಾಶಿಯಲ್ಲಿ ಬರುವ ಪರಮ ಪವಿತ್ರ ದಿನದಂದು ಹತ್ತು ಮಹಾಪಾತಕಗಳಿಂದ ಮುಕ್ತಿ ದೊರಕುತ್ತದೆ.

ಜ್ಯೇಷ್ಠ ಶುಕ್ಲ ಏಕಾದಶಿ, ನಿರ್ಜಲ ಏಕಾದಶೀ :

Advertisement

ಜ್ಯೇಷ್ಠ ಶುಕ್ಲ ಏಕಾದಶಿ, ನಿರ್ಜಲ ಏಕಾದಶೀ. ಅಂದು ನೀರನ್ನು ಸೇವಿಸದೇ ಏಕಾದಶೀ ವ್ರತಸ್ಥ ರಾಗುವುದು. ನಿರ್ಜಲ ಏಕಾದಶೀ ವರ್ಷದಲ್ಲಿ ಬರುವ ಉಳಿದ 24 ಏಕಾದಶಿಗಿಂತಲೂ ಶ್ರೇಷ್ಠ. ಶ್ರೀಕೃಷ್ಣನ ಸೂಚನೆಯಂತೆ ವೇದವ್ಯಾಸರು ನಿರ್ಜಲ ಏಕಾದಶಿಯ ಮಹತ್ವವನ್ನು ಧರ್ಮರಾಜ ಮತ್ತು ಭೀಮಸೇನನಿಗೆ ವಿವರಿಸಿದರಂತೆ. ಜ್ಯೇಷ್ಠ ಮಾಸದ ಹುಣ್ಣಿಮೆಯನ್ನು ಮನ್ವಾದಿ ಅಥವಾ ಮನ್ವಂತರದ ಆರಂಭ ಎಂದು ಸಂಬೋಧಿಸ ಲಾಗುತ್ತದೆ. ಅಂದು ದಾನಧರ್ಮ ಮತ್ತು ಪಿತೃತಿಲ ತರ್ಪಣ ವಿಶೇಷ. ಜ್ಯೇಷ್ಠ ಮಾಸದ ಪೂರ್ಣಿಮಾ ದಂದೇ ವಟಸಾವಿತ್ರಿ ಪೂರ್ಣಿಮಾ. ವಟವೃಕ್ಷಪೂಜೆ ಅಂದು ವಿಶಿಷ್ಠ. ಜ್ಯೇಷ್ಠ ಬಹುಳ ಅಮಾವಾಸ್ಯೆ (ಸತ್ಯವಾನ್‌ ಸಾವಿತ್ರೀ) ವ್ರತವನ್ನು ಆಚರಿಸುತ್ತಾರೆ. ಜ್ಯೇಷ್ಠ ಶುಕ್ಲ ತ್ರಯೋದಶಿಯಿಂದ 3 ದಿನ ತಿರುಪತಿ ತಿರುಮಲ ದೇವಸ್ಥಾನದಲ್ಲಿ  ಶ್ರೀವೆಂಕಟರಮಣ ನಿಗೆ ವಾರ್ಷಿಕ ಜ್ಯೇಷ್ಠಾಭಿಷೇಕ ನಡೆಯುತ್ತದೆ.

ಜ್ಯೇಷ್ಠ ಮಾಸದಲ್ಲಿ ಉದಕಕುಂಭದಾನ (ಜಲದಾನ), ಪಾದರಕ್ಷ, ಛತ್ರಿದಾನ, ವ್ಯಜನ (ಬೀಸಣಿಗೆ) ತಿಲ ಮತ್ತು ಚಂದನ ದಾನ ಶ್ರೇಷ್ಠ.ಮಾಧ್ವ ಯತಿಶ್ರೇಷ್ಠರ ಆರಾಧನಾ ಮಾಸ  ಮಂತ್ರಾಲಯದ ಶ್ರೀ ವಾದೀಂದ್ರತೀರ್ಥರು, ಮುಳಬಾಗಿಲಿನ ಶ್ರೀ ಶ್ರೀಪಾದರಾಜರು, ಕೊಂಭಕೋಣಂನ ಶ್ರೀ ವಿಜಯೀಂದ್ರತೀರ್ಥರು ವೃಂದಾವನಸ್ಥರಾದ ಮಾಸ.

ಪಲಿಮಾರು ಮಠದ ಶ್ರೀ ಸುರೇಶತೀರ್ಥರು   ಶ್ರೀ ವಾದಿರಾಜರು ಕ್ರಿ.ಶ 1522 ರಲ್ಲಿ ದೈವಾರ್ಷಿಕ ಪರ್ಯಾಯ ಪದ್ಧತಿಯನ್ನು ಆರಂಭಿಸಿದಾಗ ಮೊದಲ ದ್ವೆ„ವಾರ್ಷಿಕ ಪರ್ಯಾಯವನ್ನು ಮಾಡಿದವರು ಪಲಿಮಾರು ಮಠದ ಪರಂಪರೆಯಲ್ಲಿ 12ನೆಯವರಾದ ಶ್ರೀ ಸುರೇಶತೀರ್ಥರು, ಕ್ರಿ.ಶ. 1530 ಜ್ಯೇಷ್ಠ ಬಹುಳ ಪಂಚಮಿಯಂದು ಪಲಿಮಾರಿನ ಮಠದಲ್ಲಿ ವೃಂದಾವನಸ್ಥರಾದರು. ದೊರೆಯುವ ದಾಖಲೆಗಳಂತೆ ಅಷ್ಟ ಮಠದ ಸುಮಾರು ಎಂಟು ಮಂದಿ ಯತಿಗಳು ವೃಂದಾವನಸ್ಥರಾದುದು ಜ್ಯೇಷ್ಠ ಮಾಸದಲ್ಲೇ.

ಕರವೀರವ್ರತ! :

ಜ್ಯೇಷ್ಠ ಮಾಸ ಶುಕ್ಲ ಆರಂಭ ದಿನದಂದೇ ಕರವೀರವ್ರತ. ಈ ವ್ರತ ಸೂರ್ಯನಾರಾಯಣನಿಗೆ ಪ್ರೀತಿ. ಮೇಲಾಗಿ ಕರವೀರವನ್ನು ಆಯುರ್ವೇ ದೀಯ ಔಷಧ ಪದ್ಧತಿಯಲ್ಲಿ ಬಳಸುತ್ತಾರೆ. ಕರವೀರ ಉಪವಿಷ ದ್ರವ್ಯವೆಂದು ಆಯುರ್ವೇ ದದ ಉಲ್ಲೇಖ. ಇದರಲ್ಲಿ ಮುಖ್ಯವಾಗಿ ಮೂರು ಜಾತಿಗಳಿವೆ. ವಿಶೇಷವಾಗಿ ಚರ್ಮರೋಗಗಳ ಉಪಶಮನಕ್ಕೆ ಕರವೀರ ಮಿಶ್ರಣದಿಂದ ಔಷಧ ವನ್ನು ತಯಾರಿಸುತ್ತಾರೆ.

 

ಜಲಂಚಾರು ರಘುಪತಿ ತಂತ್ರಿ,

 ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next