ಲಕ್ನೋ: ವಾರಣಾಸಿಯ ಜ್ಞಾನವಾಪಿ ಆವರಣದಲ್ಲಿರುವ ದಕ್ಷಿಣದ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಜ್ಞಾನವಾಪಿ ಮಸೀದಿ ಸಂಕೀರ್ಣದ ದಕ್ಷಿಣ ಪ್ರದೇಶದಲ್ಲಿರುವ ‘ವ್ಯಾಸ್ ಜಿ ಕಾ ತೆಹ್ಖಾನಾ’ದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಿದ ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ಹಿಂದೆ ಜನವರಿ 31 ರಂದು ವಾರಣಾಸಿ ನ್ಯಾಯಾಲಯವು ಹಿಂದೂ ಭಕ್ತರಿಗೆ ಜ್ಞಾನವಾಪಿ ಆವರಣದ ದಕ್ಷಿಣ ನೆಲಮಾಳಿಗೆಯೊಳಗೆ ಪೂಜೆ ಮಾಡಲು ಅವಕಾಶ ನೀಡಿತು. ಭಕ್ತರು ಪೂಜೆ ಸಲ್ಲಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ ನ್ಯಾಯಾಲಯ, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ಗೆ ಅರ್ಚಕರನ್ನು ನಾಮನಿರ್ದೇಶನ ಮಾಡುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಮಸೀದಿ ಸಮಿತಿಯು ವಾರಣಾಸಿ ನ್ಯಾಯಾಲಯದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಫೆಬ್ರವರಿ 15ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಇದನ್ನೂ ಓದಿ: ನಾಪತ್ತೆ ಪ್ರಕರಣ ಸುಖಾಂತ್ಯ: ಭಂಡಾಜೆ ಫಾಲ್ಸ್ ಚಾರಣಕ್ಕೆ ಬಂದು ನಾಪತ್ತೆಯಾಗಿದ್ದ ಯುವಕ ಪತ್ತೆ