ಬೆಂಗಳೂರು: ಹಿಂದೂಗಳ ರಕ್ಷಣೆಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಹಿಂದೂಪರ ಸಂಘಟನೆಗಳು ಒಂದೇ ವೇದಿಕೆಯಡಿ ಕಣಕ್ಕಿಳಿಯಲು ನಿರ್ಧರಿಸಿವೆ.
ಇದರ ಮೊದಲ ಹೆಜ್ಜೆಯಾಗಿ ಆರ್‌ಎಸ್‌ಎಸ್ ಕಾರ್ಯಕರ್ತರು ಕಟ್ಟಿದ ಜನಸ್ಪಂದನ ಸಂಘಟನೆ ಈಗ ಅಖೀಲ ಭಾರತ ಹಿಂದೂ
ಮಹಾಸಭಾದಲ್ಲಿ ವಿಲೀನಗೊಂಡಿದೆ. ಮುಂದಿನ ದಿನಗಳಲ್ಲಿ ಕರಾವಳಿ, ಉತ್ತರ ಕರ್ನಾಟಕದಲ್ಲಿನ ಇನ್ನಷ್ಟು ಹಿಂದೂ ಸಂಘಟನೆಗಳು ಮಹಾಸಭಾದಲ್ಲಿ ವಿಲೀನಗೊಳ್ಳಲಿದ್ದು, ಬರುವ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಒಂದೇ ವೇದಿಕೆಯಲ್ಲಿ ಹಿಂದೂ ಕಾರ್ಯಕರ್ತರು ಸ್ಪರ್ಧಿಸಲಿದ್ದಾರೆ ಎಂದು ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ನಾ.ಸುಬ್ರಮಣ್ಯರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದೂ ಧರ್ಮದ ಮೇಲೆ ಹಲವು ರೀತಿಯ ಆಕ್ರಮಣಗಳು ನಡೆಯುತ್ತಿವೆ. ಸರ್ಕಾರ ಜನರ ಹಿತಕ್ಕಾಗಿ ಕಾರ್ಯ ನಿರ್ವಹಿಸುವುದನ್ನು ಬಿಟ್ಟು, ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಕೆಲಸಗಳಲ್ಲಿ ನಿರತವಾಗಿದೆ. ಟಿಪ್ಪು ಜಯಂತಿ ಆಚರಣೆ ಮೂಲಕ ಜನರ ಭಾವನೆಗಳನ್ನು ಕೆದಕುವ ಕೆಲಸ ಮಾಡುತ್ತಿದೆ. ಮತ್ತೂಂದೆಡೆ ವೀರಶೈವ, ಅಹಿಂದ ಹೆಸರುಗಳಲ್ಲಿ ವೋಟ್‌ಬ್ಯಾಂಕಿಗಾಗಿ ಹಿಂದೂ ಧರ್ಮದ ನಡುವೆ ಬಿರುಕು ಮೂಡಿಸುವುದು, ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣು ಮಕ್ಕಳ ಮತಾಂತರ, ರೋಹಿಂಗ್ಯಾ ಮುಸ್ಲಿಂ ಸಮುದಾಯಗಳ ವಿಚಾರದಲ್ಲಿ ಮೌನ ವಹಿಸಿರುವುದು, ಹಿಂದೂಗಳ ಕಗ್ಗೊಲೆ ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಸೇರಿ ಈ ಎಲ್ಲ ಶಕ್ತಿಗಳ ವಿರುದ್ಧ ಹೋರಾಡಲು ಹಿಂದೂಪರ ಸಂಘಟನೆಗಳ ವಿಲೀನ ಮುನ್ನುಡಿ ಆಗಲಿದೆ ಎಂದರು.
ಬಿಜೆಪಿ ಈ ಹಿಂದೆ ಅಧಿಕಾರದಲ್ಲಿತ್ತು. ಆದರೆ, ಭ್ರಷ್ಟಾಚಾರ, ಆಂತರಿಕ ಕಲಹಗಳಲ್ಲೇ ಕಾಲಹರಣ ಮಾಡಿತು. ಈ ಮಧ್ಯೆ,
ಹಿಂದೂಗಳಿಗೆ ನ್ಯಾಯ ಸಿಗಲಿಲ್ಲ. ಆದ್ದರಿಂದ ಈ ರಾಜಕೀಯ ಪಕ್ಷಗಳಿಂದ ಹೊರತಾದ ಹಿಂದೂಪರ ಸಂಘಟನೆಗಳು ಒಟ್ಟಾಗಿ
ಬರುವ ಚುನಾವಣೆಯಲ್ಲಿ ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜನಸ್ಪಂದನ ಸಂಸ್ಥಾಪಕ ನಾರಾಯಣ ಶರ್ಮ, ಆರೆಸ್ಸೆಸ್ ಮುಖಂಡ ಕೈ.ಪೊ. ಶೇಷಾದ್ರಿ, ಪದಾಧಿಕಾರಿಗಳಾದ ಶ್ರೀಧರ್, ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.