ಅಹಮದಾಬಾದ್: ಹಿಂದೂ ರಾಷ್ಟ್ರವಾದಿ ನಾಯಕ ಮತ್ತು ಹಿಂದೂ ಸಮಾಜ ಪಕ್ಷದ ಸಂಸ್ಥಾಪಕ ಕಮಲೇಶ್ ತಿವಾರಿ ಹತ್ಯೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಗುಜರಾತ್ ಉಗ್ರ ನಿಗ್ರಹ ದಳದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅಶ್ಫಕ್ ಹುಸೈನ್ ಮತ್ತು ಮೊಯಿನುದ್ದೀನ್ ಖುರ್ಷಿದ್ ಎಂಬಿಬ್ಬರು ಆರೋಪಿಗಳನ್ನು ಗುಜರಾತ್ ರಾಜಸ್ಥಾನ ಗಡಿಪ್ರದೇಶದ ಶಾಮ್ಲಾಜಿ ಎಂಬಲ್ಲಿ ಮಂಗಳವಾರದಂದು ಬಂಧಿಸಿರುವುದಾಗಿ ತಿಳಿದುಬಂದಿದೆ.
ಅಕ್ಟೋಬರ್ 18ರಂದು ಉತ್ತರಪ್ರದೇಶದ ಲಕ್ನೋದಲ್ಲಿ ಕಮಲೇಶ್ ತಿವಾರಿ ಅವರ ಹತ್ಯೆಯಾಗಿತ್ತು. ಮತ್ತು ಅಶ್ಪಕ್ ಹಾಗೂ ಮೊಯಿನುದ್ದೀನ್ ಎಂಬಿಬ್ಬರು ಈ ಹತ್ಯೆಯನ್ನು ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಇದೀಗ ಗುಜರಾತ್ ಎಟಿಎಸ್ ವಶದಲ್ಲಿರುವ ಆರೋಪಿಗಳಿಬ್ಬರೂ ತಾವು ಕಮಲೇಶ್ ತಿವಾರಿ ಅವರನ್ನು ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಮತ್ತು ತಿವಾರಿ ಅವರು ಪ್ರವಾದಿ ಮಹಮ್ಮದ್ ಅವರ ಕುರಿತಾಗಿ ಕೀಳುಮಟ್ಟದ ಕಾಮೆಂಟ್ ಮಾಡಿದ ಕಾರಣಕ್ಕೆ ಅವರನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿರುವುದಾಗಿ ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ತಿವಾರಿ ಅವರನ್ನು ಹತ್ಯೆ ಮಾಡಿದ ಬಳಿಕ ಈ ಆರೋಪಿಗಳಿಬ್ಬರೂ ನೇಪಾಲಕ್ಕೆ ಪಲಾಯನ ಮಾಡಿದ್ದರು. ಆದರೆ ತಮ್ಮ ಕೈಯಲ್ಲಿದ್ದ ಹಣ ಖಾಲಿಯಾದ ಕಾರಣ ಅವರು ಮತ್ತೆ ಭಾರತಕ್ಕೆ ವಾಪಾಸು ಬಂದಿದ್ದರು. ಹಣಕ್ಕಾಗಿ ಅವರು ತಮ್ಮ ಗೆಳೆಯರು ಮತ್ತು ಸಂಬಂಧಿಕರಲ್ಲಿ ಕೆಲವರನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾಡಿದ್ದರು. ಆದರೆ ಇವರೆಲ್ಲರ ಮೇಲೆ ಪೊಲೀಸರು ನಿಗಾ ಇರಿಸಿದ್ದರಿಂದ ಆರೋಪಿಗಳ ಜಾಡುಪತ್ತೆ ಸುಲಭವಾಯಿತು. ಇದೀಗ ಗುಜರಾತ್ ಎಟಿಎಸ್ ಪೊಲೀಸರು ಈ ಆರೋಪಿಗಳಿಬ್ಬರನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.