Advertisement

ಹಿಂದು-ಮುಸ್ಲಿಂ ಭಾವೈಕ್ಯ ಧಾರ್ಮಿಕ ಕಾರ್ಯಕ್ರಮ

12:49 PM Feb 17, 2017 | |

ಹುಣಸೂರು: ದಕ್ಷಿಣ ಕರ್ನಾಟಕದಲ್ಲೇ ವಿಶಿಷ್ಟವಾದ ಹಿಂದೂ – ಮುಸ್ಲಿಮರ ಭಾವೈಕ್ಯತೆ ಮೆರೆವ ಹುಣಸೂರು ತಾಲೂಕಿನ ರತ್ನಪುರಿ(ದರ್ಗ)ಯಲ್ಲಿ ಶ್ರೀಅಂಜನೇಯ ಸ್ವಾಮಿಯ 52 ಮಹಾಭಿಷೇಕ, ಪಲ್ಲಕ್ಕಿ ಉತ್ಸವ ಹಾಗೂ ಮುಸ್ಲಿಮರ ಜಮಾಲ್‌ ಬೀಬೀಮಾ ಸಾಹೇಬರ ಗಂಧೋತ್ಸವ, ಉರುಸ್‌ ಹಾಗೂ ಫ‌ಕೀರರ ಜರಬ್‌ ಕಾರ್ಯಕ್ರಮ ಫೆ.17ರಿಂದ 19ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

Advertisement

ಹಿಂದೂ-ಮುಸ್ಲಿಮರು ಒಟ್ಟಾಗಿ ಸೇರಿ ಉತ್ಸವ, ಉರೂಸ್‌ ಆಚರಿಸುವುದರಿಂದ ಬಹಳಷ್ಟು ಮಹತ್ವ ಪಡೆದಿದೆ. ಇಲ್ಲಿನ ಜಾತ್ರೆಯಲ್ಲಿ ಜಾನುವಾರುಗಳದ್ದೇ ದೊಡ್ಡ ಹಬ್ಬ. ಜಾತ್ರೆ ಆರಂಭಕ್ಕೂ ವಾರದ ಮೊದಲೇ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ರೂ. ಬೆಲೆ ಬಾಳುವ ಎತ್ತುಗಳು, ಬೀಜದ ಹೋರಿ, ಹಸುಗಳನ್ನು ಕಟ್ಟಿದ್ದಾರೆ. ಇಲ್ಲಿ ಒಂದೇ ವಾರದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ.

ಕೆಲವು ರೈತರು ಪ್ರತಿಷ್ಠೆಗೆ ಅತ್ಯುತ್ತಮ ರಾಸು ಬಹುಮಾನ ಪಡೆಯ ಲ್ಲಿಕ್ಕಾಗಿಯೇ ಜಾತ್ರೆಗೆ ತರುತ್ತಾರೆ. ರಾಸು ಹರಕೆ ಹೊತ್ತವರು ಜಾತ್ರೆಗೆ ಮುನ್ನಾ ದಿನವೇ ಆಗಮಿಸಿ ಹರಕೆ ತೀರಿಸುತ್ತಾರೆ. ಸುತ್ತಮುತ್ತಲಿನ ರೈತರು ರಥೋತ್ಸವದ ಮಾರನೇ ದಿನ ರಾಸುಗಳನ್ನು ದೇಗುಲದ ಸುತ್ತ ಮೆರವಣಿಗೆ, ಪಂಜಿನ ಸೇವೆ ನಡೆಸಿ ಜಾನುವಾರುಗಳಿಗೆ ರೋಗ ತಗುಲದಂತೆ ಹರಕೆ ಹೊರುತ್ತಾರೆ.

ಅಂಜನೇಯ ಮಹಾಭಿಷೇಕ: ಜಾತ್ರಾ ಮಾಳದಲ್ಲಿ ರುವ ಇತಿಹಾಸ ಉಳ್ಳ ಉತ್ತರಾಭಿಮುಖ ವಾಗಿರುವ ಶ್ರೀ ಅಂಜನೇಯಸ್ವಾಮಿ ದೇವರಿಗೆ ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ಕೊಂಡೋತ್ಸವವನ್ನು ದೇಗುಲ ಸಮಿತಿ 53 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಉತ್ಸವದಂದು ಅನ್ನದಾನ ಏರ್ಪಡಿಸಲಾಗುತ್ತಿದೆ.

ಕೊಂಡೋತ್ಸವ: ಧರ್ಮಾಪುರದ ಗ್ರಾಮಸ್ಥರು ಗ್ರಾಮದಿಂದ ಸೌದೆ ತಂದು ಕೊಂಡೋತ್ಸವ ನಡೆಸಿ ಕೊಡುತ್ತಾರೆ, ಜಾತ್ರೆಗೆ ಉದ್ದೂರ್‌ಕಾವಲ್‌, ಉಯಿಗೊಂಡನಹಳ್ಳಿ. ಧರ್ಮಾಪುರ, ಅಸ್ಪತ್ರೆ ಕಾವಲ್‌, ನಂಜಾಪುರ, ಗೌರಿಪುರ, ದಾಸನಪುರ, ಹಳ್ಳದಕೂಪ್ಪಲು, ತರಿಕಲ್ಲು, ಮಲ್ಲೆಗೌಡನಕೂಪ್ಪಲು. ಹೊನ್ನಿಕುಪ್ಪೆ, ಕುಡಿನೀರುಮುದ್ದನಹಳ್ಳಿ, ಹುಂಡಿಮಾಳ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಜಾತ್ರೆ ಯಶಸ್ಸಿಗೆ ಸಹಕಾರ ನೀಡುತ್ತಾರೆ.

Advertisement

ಗಂಧೋತ್ಸವದ ಸಂಭ್ರಮ: ಜಾತ್ರಾಮಾಳದಲ್ಲಿರುವ ಜಮಾಲ್‌ ಬೀಬೀ ಮಾ ಸಾಹೇಬರ ದರ್ಗಾಕ್ಕೆ ಹಿಂದೂ – ಮುಸ್ಲಿಂ ಭಾಂದವರು ವಿವಿಧೆಡೆಗಳಿಂದ ಗಂಧವನ್ನು ಮೆರವಣಿಗೆಯಲ್ಲಿ ತಂದು (ದರ್ಗಾ) ಗೋರಿಗೆ ಪೂಜೆಸಲ್ಲಿಸುತ್ತಾರೆ. ಗಂಧೋತ್ಸವ ನೆರವೇರಿಸಿದ ನಂತರ ಫ‌ಕೀರರ ಚಮತ್ಕಾರ (ಜರಬ್‌) ಸಾಹಸ ಪ್ರದರ್ಶನವಿರಲಿದೆ. ಇಡೀ ಜಾತ್ರೆಗೆ ಸಿಹಿ ಬೂಂದಿಯದೇ ಪಾರುಪತ್ಯವಿದೆ. ಸಿಹಿ ಬೂಂದಿಯೊಂದಿಗೆ ತೆರಳಿ ಪೂಜೆ ಸಲ್ಲಿಸಿ ಪ್ರಸಾದವಾಗಿ ಮನೆಗೆ ಕೊಂಡೊಯ್ಯುವುದು ಇಲ್ಲಿನ ವಿಶೇಷ.

ಕಾರ್ಯಕ್ರಮಗಳು
ಫೆ.17:
ಮುಂಜಾನೆ 5ರಿಂದ ಹೋಮ, ಹವನ, ಮಹಾಭಿಷೇಕ.

ಫೆ.18: ಬೆಳಗ್ಗೆ 7ರಿಂದ 8.30ರ ವರೆಗೆ ಧರ್ಮಾಪುರ ಗ್ರಾಮಸ್ಥರಿಂದ ಕೊಂಡೋತ್ಸವ, ಬೆಳಗ್ಗೆ ವಾಲಿಬಾಲ್‌ ಸ್ಪರ್ಧೆ, ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ, ಮಧ್ಯಾಹ್ನ 3ಕ್ಕೆ ವಾಲಿಬಾಲ್‌ ಪಂದ್ಯಾವಳಿ ಉದ್ಘಾಟನೆ, ಸಂಜೆ 4ಕ್ಕೆ ಅಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ.

ಫೆ.19: ರಾತ್ರಿ 8ಕ್ಕೆ ಜಮಾಲ್‌ ಬೀಬೀಮಾ  ಉರೂಸ್‌, ಗಂಧೋತ್ಸವ ಹಾಗೂ ಜರಬ್‌.

ನಾಳೆ ವಾಲಿಬಾಲ್‌ ಪಂದ್ಯ
ಹುಣಸೂರು: ತಾಲೂಕು ರತ್ನಪುರಿಯ ಶ್ರೀ ಆಂಜನೇಯಸ್ವಾಮಿ ಹಾಗೂ ಜಮಾಲ್‌ ಬೀಬಿ ಮಾ ಉರುಸ್‌ ಅಂಗವಾಗಿ ಫೆ.18 ಮತ್ತು 19ರಂದು ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿ ಆಯೋಜಿಸಲಾಗಿದೆ.

ವಿಜೇತ ಪ್ರಥಮ ತಂಡಕ್ಕೆ 25 ಸಾವಿರ, ದ್ವಿತೀಯ 15 ಸಾವಿರ, ತೃತೀಯ 10 ಸಾವಿರ ಬಹುಮಾನ ಮತ್ತು ಆಕರ್ಷಕ ಟ್ರೋಫಿ ಹಾಗೂ 5 ಸಾವಿರ ರೂ ಸಮಾಧಾನಕರ ಬಹುಮಾನವಿದೆ. ಆಸಕ್ತ ತಂಡಗಳು ಫೆ.18ರ ಬೆಳಗ್ಗೆ 10ರೊಳಗೆ ನೋಂದಾಯಿಸಿಕೊಳ್ಳಬೇಕು. ಪ್ರತಿ ತಂಡಕ್ಕೆ 500 ರೂ. ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದೆ. ಆಟಗಾರರಿಗೆ ಊಟ, ವಸತಿ ವ್ಯವಸ್ಥೆ ಇರಲಿದೆ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಆರ್‌. ಪ್ರಭು (9008022679) ತಿಳಿಸಿದ್ದಾರೆ.

* ಸಂಪತ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next