ತಿರುವನಂತಪುರಂ: ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆ ಆಗಲು ಹೋದ ವೇಳೆ ಪೊಲೀಸರು ಮಂಟಪದಿಂದ ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೂ.17 ರಂದು ಆಲ್ಫಿಯಾ (18) ಅಖಿಲ್ (21) ನನ್ನು ತಿರುವನಂತಪುರಂನಲ್ಲಿರುವ ಕೋವಲಂ ದೇವಾಲಯದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಇನ್ನೇನು ಮದುವೆ ಶಾಸ್ತ್ರ ನಡೆದು ತಾಳಿ ಕಟ್ಟುವ ವೇಳೆಯೇ ಪೊಲೀಸರು ದೇವಸ್ಥಾನಕ್ಕೆ ಬಂದು ಯುವತಿಯನ್ನು ಎಳೆದುಕೊಂಡು ಹೋಗಿದ್ದಾರೆ.
ಮುಸ್ಲಿಂ ಯುವತಿ ಆಗಿರುವ ಆಲ್ಫಿಯಾ ಹಿಂದೂ ಯುವಕ ಅಖಿಲ್ ನನ್ನು ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದಾಳೆ. ಇಬ್ಬರ ಧರ್ಮ ಬೇರೆಯಾಗಿದ್ದರಿಂದ ಎರಡೂ ಕಡೆಯಿಂದ ಸಂಬಂಧಕ್ಕೆ ವಿರೋಧವಿದೆ.
ಜೂ.16 ರಂದು ಆಲ್ಫಿಯಾ ವಿವಾಹವಾಗುವ ನಿಟ್ಟಿನಲ್ಲಿ ತಿರುವನಂತಪುರಂಕ್ಕೆ ತೆರಳಿದ್ದಾರೆ. ಮರುದಿನ ಆಲ್ಫಿಯಾ ಮನೆಯವರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ.
ಇತ್ತ ದೇವಸ್ಥಾನದಲ್ಲಿ ಇನ್ನೇನು ಅಖಿಲ್ – ಆಲ್ಫಿಯಾ ವಿವಾಹ ನಡೆಯಬೇಕು ಅಷ್ಟರಲ್ಲೇ ಪೊಲೀಸರು ಬಂದಿದ್ದಾರೆ. ಪ್ರಕರಣವನ್ನು ಮುಕ್ತಾಯಗೊಳಿಸಲು ಆಲ್ಫಿಯಾಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ನಿಟ್ಟಿನಲ್ಲಿ ನಮ್ಮೊಂದಿಗೆ ಬನ್ನಿ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರ ಮಾತನ್ನು ಕೇಳದಿದ್ದಕ್ಕೆ ಆಲ್ಫಿಯಾಳನ್ನು ಪೊಲೀಸರು ಎಳೆದೊಯ್ದು ವಾಹನದಲ್ಲಿ ಕೂರಿಸಿದ್ದಾರೆ.
ನಾನು ಸ್ವಇಚ್ಛೆಯಿಂದ ಅಖಿಲ್ ನೊಂದಿಗೆ ಮದುವೆಯಾಗಲು ಮನೆಯಿಂದ ಬಂದಿರುವುದಾಗಿ ಪೊಲೀಸರ ಬಳಿ ಜೂ.16 ರಂದು ಹೇಳಿದ್ದೆ. ಪೊಲೀಸರು ನನ್ನನು ನಡೆಸಿಕೊಂಡ ರೀತಿ ಸರಿಯಲ್ಲ. ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ. ನನಗೆ 18 ವರ್ಷ ಆಗಿಲ್ಲ ಎಂದಿದ್ದಾರೆ. ನನ್ನ ಮನೆಯವರು ದೂರು ನೀಡಿದ ಬಳಿಕ ಈ ಘಟನೆ ನಡೆದಿದೆ ಎಂದು ಯುವತಿ ಅಲ್ಫಿಯಾ ಹೇಳಿದ್ದಾಳೆ.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ಜೂ.20 ರಂದು (ಮಂಗಳವಾರ) ಆಲ್ಫಿಯಾ ಹಾಗೂ ಅಖಿಲ್ ವಿವಾಹವಾಗಿದ್ದಾರೆ ಎಂದು ವರದಿ ತಿಳಿಸಿದೆ.