ಮಂಗಳೂರು: ಅಖೀಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಎಂದು ಸ್ವಯಂ ಘೋಷಿತ ವ್ಯಕ್ತಿಯೊಬ್ಬರು ಕೆಲವು ಅಮಾಯಕ ಹಿಂದೂ ಯುವಕರ ತಂಡವನ್ನು ಕಟ್ಟಿಕೊಂಡು ಹಿಂದೂ ಮಹಾಸಭಾದ ಬಾವುಟ, ಲಾಂಛನವನ್ನು ದುರ್ಬಳಕೆ ಮಾಡುತ್ತಿದ್ದು, ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಅಖೀಲ ಭಾರತ ಹಿಂದೂ ಮಹಾಸಭಾ (ಕರ್ನಾಟಕ) ದ.ಕ. ಜಿಲ್ಲಾಧ್ಯಕ್ಷ ಪ್ರಮೋದ್ ಉಚ್ಚಿಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಖೀಲ ಭಾರತ ಹಿಂದೂ ಮಹಾ ಸಭಾ ರಾಷ್ಟ್ರೀಯ ಪಕ್ಷವಾಗಿದ್ದು, ರಾಷ್ಟ್ರೀಯ ಅಧ್ಯಕ್ಷರಾಗಿರುವ ಚಕ್ರ ಪಾಣಿ ಮಹಾರಾಜ್ ಅವರು ಕಳೆದ ಎಪ್ರಿಲ್‌ನಲ್ಲಿ ಮನೋಜ್ ಆಲುಂಗಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಅಧಿಕೃತವಾಗಿ ನೇಮಕ ಮಾಡಿದ್ದಾರೆ.
ಸ್ವಯಂಘೋಷಿತ ವ್ಯಕ್ತಿ ಮುಖ್ಯ ಮಂತ್ರಿಗಳಿಗೆ ಕೊಲೆ ಬೆದರಿಕೆ ಹಾಕುವುದು, ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಆತಂಕ ಮತ್ತು ಗೊಂದಲಗಳನ್ನು ಸೃಷ್ಟಿ ಮಾಡಿ, ಪಕ್ಷದ ಹೆಸರಿಗೆ ಚ್ಯುತಿ ತರುತ್ತಿದ್ದಾರೆ. ಬೆದರಿಕೆ ಸುಲಿಗೆಯಲ್ಲೂ ತೊಡಗಿಸಿಕೊಂಡಿದ್ದು, ಇದರ ವಿರುದ್ಧ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ, ಆ ವ್ಯಕ್ತಿ ಸಭಾದ ಹೆಸರಿನಲ್ಲಿ ಸಭೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದರು.
ಉಡುಪಿ ಜಿಲ್ಲಾಧ್ಯಕ್ಷ ಗುಡ್ರಿ ರಾಮಣ್ಣ ಶೆಟ್ಟಿ, ವಿದ್ಯಾರ್ಥಿ ಸಭಾ ದ.ಕ. ಜಿಲ್ಲಾಧ್ಯಕ್ಷ ಸುಶಾಂತ್ ಭಕ್ತಕೋಡಿ, ಕಾರ್ಯದರ್ಶಿ ಶೈಲೇಶ್ ದೇವಾಡಿಗ, ಉಪಾಧ್ಯಕ್ಷ ಯೋಗೀಶ್ ಕುತ್ಪಾಡಿ ಪತ್ರಿಕಾಗೋಷ್ಠಿಯಲ್ಲಿದ್ದರು.