ಭಟ್ಕಳ: ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಭಟ್ಕಳ ಪರಸಭೆ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದು ಅಂಗಡಿಕಾರರಿಂದ ಹರಾಜು ಪ್ರಕ್ರಿಯೆಗೆ ಡಿಮಾಂಡ್ ಡ್ರಾಫ್ಟ್ ಪಡೆದುಕೊಂಡ ನಂತರ ಉರ್ದು ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿಲ್ಲ ಎನ್ನುವ ಕ್ಷುಲ್ಲಕ ಕಾರಣ ನೀಡಿ ಹರಾಜು ಪ್ರಕ್ರಿಯೆಯನ್ನೇ ಮುಂದೂಡಿದೆ ಎಂದು ಆರೋಪಿಸಿ ಪುರಸಭಾ ಅಂಗಡಿಕಾರರು ಪುರಸಭೆಯ ಎದುರು ಪ್ರತಿಭಟನೆ ನಡೆಸಿದರು.
ಭಟ್ಕಳ ಪುರಸಭೆಯ ಮುಂದೆ ಅಂಗಡಿಕಾರರ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ನಾಮ ನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ ಕಳೆದ ಫೆ.7ರಂದು ನಡೆಯಬೇಕಾಗಿದ್ದ ನ್ಯಾಯ ಸಮ್ಮತವಾದ ಹರಾಜು ಪ್ರಕ್ರಿಯೆಯನ್ನು ಉರ್ದು ಭಾಷೆಯಲ್ಲಿ ಜಾಹಿರಾತು ಕೊಡಲಿಲ್ಲ ಅನ್ನುವ ಕಾರಣ ನೀಡಿ ಸಂಪೂರ್ಣ ಪ್ರಕ್ರಿಯೆಯನ್ನು ಮುಂದೂಡಿ ಗೊಂದಲ ಸೃಷ್ಟಿಮಾಡಲು ಹುನ್ನಾರ ನಡೆಸಿದಂತಿದೆ. ಈಗಾಗಲೇ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಂಗಡಿಕಾರರಿಗೆ ಅನ್ಯಾಯ ಮಾಡಿ ಇತರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪುರಸಭೆಯ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ. ಈ ಹಿಂದೆ ಕೂಡಾ ಪುರಸಭಾ ಅಂಗಡಿ ಮಳಿಗೆಗಳ ಅವೈಜ್ಞಾನಿಕ ಹರಾಜು ಪ್ರಕ್ರಿಯೆ ಹಾಗೂ ನಂತರದ ಬೆಳವಣಿಗೆಯಲ್ಲಿ ರಾಮಚಂದ್ರ ನಾಯ್ಕ ಎನ್ನುವವರು ಪ್ರಾಣ ಕಳೆದುಕೊಂಡಿರುವ ಘಟನೆ ಇನ್ನೂ ಹಸಿರಾಗಿರುವಾಗಲೇ ಪುರಸಭಾ ಅಧ್ಯಕ್ಷರು ಯಾವುದೇ ಸಭೆಯನ್ನು ಕರೆಯದೇ ಏಕಪಕ್ಷೀಯವಾಗಿ ನಿರ್ಣಯವನ್ನು ಕೈಗೊಂಡಿರುವುದು ಸರಿಯಲ್ಲ. ತಕ್ಷಣ ಹರಾಜು ಪ್ರಕ್ರಿಯೆಯನ್ನು ನಡೆಸಬೇಕು ಇಲ್ಲವಾದಲ್ಲಿ ಮಂಗಳವಾರದಿಂದ ರಸ್ತೆಯಲ್ಲಿ ಕುಳಿತು ಅಂಗಡಿಕಾರರು ಮತ್ತು ಸಾರ್ವಜನಿಕರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಗಡಿಕಾರ ರಾಮನಾಥ ಬಳೇಗಾರ್ ಈಗಾಗಲೇ 21 ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ೪೬ ಜನರು ಡಿ.ಡಿ. ಯನ್ನು ನೀಡಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುತ್ತಾರೆ. ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಹರಾಜು ಪ್ರಕ್ರಿಯ ಹಮ್ಮಿಕೊಂಡಿದ್ದು ಇದೀಗ ಕ್ಷುಲ್ಲಕ ಕಾರಣಕ್ಕೆ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿರುವುದರ ಹಿಂದೆ ಬೃಹತ್ ಷಡ್ಯಂತ್ರ ಇದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಈ ಹಿಂದೆ ಹರಾಜು ಪ್ರಕ್ರಿಯೆಯನ್ನು ನಡೆಸಿದಾಗ ಬೇಕಾಬಿಟ್ಟಿ ಹರಾಜು ಕೂಗಿ, ಲಕ್ಷಾಂತರ ರೂಪಾಯಿಗೆ ಹರಾಜು ಹಾಕಿ ನಂತರ ನಾಪತ್ತೆಯಾಗಿದ್ದರಿಂದ ಪುರಸಭೆಗೆ ಲಕ್ಷಾಂತರ ರೂ. ಹಾನಿಯಾಗಿದ್ದನ್ನು ಸ್ಮರಿಸಿದ ಅವರು ಈ ಬಾರಿಯೂ ಕೂಡಾ ತಮಗೆ ಬೇಕಾದವರನ್ನು ಹರಾಜು ಪ್ರಕ್ರಿಯೆಯಲ್ಲಿ ತೂರಿಸಿ, ಸಂಪೂಣಾ ಹರಾಜು ಪ್ರಕ್ರಿಯೆಯನ್ನೇ ಗೊಂದಲಮಯವನ್ನಾಗಿಸುವ ಹುನ್ನಾರ ಅಧ್ಯಕ್ಷರದ್ದಾಗಿದೆ ಎಂದೂ ದೂರಿದರು.
ತಕ್ಷಣ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಮುಂದೆ ಆಗಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಾಗುವ ಎಲ್ಲಾ ಅನಾಹುತಗಳಿಗೆ ಪುರಸಭಾ ಅಧ್ಯಕ್ಷರೇ ಜವಾಬ್ದಾರರಾಗಬೇಕಾಗುತ್ತದೆ ಎಂದ ಅವರು ನ್ಯಾಯ ದೊರೆಯುವ ತನಕವೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದೂ ಹೇಳಿದರು.
ಪುರಸಭಾ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಗೆ ಧಿಕ್ಕಾರ ಕೂಗಿದ ಅಂಗಡಿಕಾರರು ತಕ್ಷಣ ಹರಾಜು ಹಾಕಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಅಂಗಡಿಕಾರರು ಹಾಜರಿದ್ದರು.