ಚಿತ್ರದುರ್ಗ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಕೌಶಲ್ಯವನ್ನೂ ರೂಢಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ್ ರೆಡ್ಡಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಗುರುವಾರ ಹಿಂದಿ ಸೇವಕ್ ಬ್ಲಾಗ್ ಉದ್ಘಾಟಿಸಿಅವರು ಮಾತನಾಡಿದರು. ಮಕ್ಕಳು ಹಾಗೂ ಸಮಾಜದ ಹಿತದೃಷ್ಟಿಯಿಂದ ನಿಮ್ಮ ಮನಸ್ಥಿತಿಗಳನ್ನು ಬದಲಾಯಿಸಿಕೊಳ್ಳಬೇಕು. ಶಿಕ್ಷಕ ವೃತ್ತಿ ಪವಿತ್ರವಾದುದು. ಸ್ವಯಂಕೃತ ಅಪರಾಧಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಶಿಕ್ಷಣ ಕ್ಷೇತ್ರ ಅತ್ಯಂತ ವಿಸ್ತಾರವಾಗಿರುವುದರಿಂದ ಇಲ್ಲಿ ಕೆಲಸ ಮಾಡಲು ಹೆಮ್ಮೆ ಪಡಬೇಕು ಎಂದರು.
ಮಕ್ಕಳ ಸಮಸ್ಯೆಗಳಿಗೆ ಉತ್ತರ ಕೊಡುವ ಮಾರ್ಗೋಪಾಯಗಳನ್ನು ಬ್ಲಾಗ್‌ನಲ್ಲಿ ಹಾಕಬೇಕಿದೆ. ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಮಾರ್ಗದರ್ಶನ ನೀಡಲು ನಿಮಗೆ ಸುವರ್ಣಾವಕಾಶ ಒದಗಿದೆ. ಸರಿಯಾಗಿ ಬಳಸಿಕೊಳ್ಳಿ. ಹಿಂದಿನ ಕಾಲದಲ್ಲಿ ಗುರುಗಳು ಮಕ್ಕಳಿಗೆ ಕ್ರಮಬದ್ಧವಾದ ಶಿಕ್ಷಣ ನೀಡುತ್ತಿದ್ದರು. ತಿಳಿವಳಿಕೆ, ಜ್ಞಾನ ಇಲ್ಲದಿದ್ದರೆ ನಿಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.
ಹಿಂದಿ, ಇಂಗ್ಲಿಷ್ ಪ್ರಧಾನ ಭಾಷೆ ಆಗಿರುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಿಗೆ ಹೋದರು ಇವೆರಡು ಭಾಷೆಗಳನ್ನು ಕಲಿತಿರಬೇಕು. ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ದೊಡ್ಡ ಮನಸ್ಸು ಮಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಶಿಕ್ಷಕರುಗಳಾದ ನಿಮಗೆ ಆತ್ಮತೃಪ್ತಿ ಸಿಗುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕೌಶಲ್ಯ ಶಿಕ್ಷಣ ಅತಿ ಮುಖ್ಯ. ಮಹಾಪುರುಷರ ಇತಿಹಾಸವನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು. ಕೋವಿಡ್-19 ಸಂಕಷ್ಟ ಕಾಲದಲ್ಲಿ ಶಿಕ್ಷಕರುಗಳು ಆನ್‌ಲೈನ್ ಶಿಕ್ಷಣ ನೀಡುತ್ತಿರುವುದು ಸಂತೋಷದ ಸಂಗತಿ. ಎಲ್ಲರೂ ಸುರಕ್ಷತೆ ದೃಷ್ಟಿಯಿಂದ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಿ. ಸ್ಯಾನಿಟೈಸರ್ ಬಳಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆಯಬಾರದು. ಮಕ್ಕಳಿಗೆ ಶಾಲಾ ಕೊಠಡಿಗಳಲ್ಲಿ ಪಾಠ ಮಾಡುವಾಗ ಶಿಕ್ಷಕರು ಹಾಸ್ಯ ಪ್ರವೃತ್ತಿಯನ್ನು ಬೆಳೆಸಿಕೊಂಡಿರಬೇಕು. ನಿಮ್ಮಲ್ಲಿರುವ ಜ್ಞಾನ ಮತ್ತು ತಿಳಿವಳಿಕೆಯನ್ನು ಸಮಾಜಕ್ಕೆ ಕೊಡಿ ಎಂದರು.
ಶಿಕ್ಷಕ ಜಿ.ಬಿ. ಪಂಚಾಕ್ಷರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಿ.ಎಸ್. ಸುರೇಶ್ ನಾಯ್ಕ, ಚಳ್ಳಕೆರೆ ಕ್ಷೇತ್ರ ಶಿಕ್ಷಣಾ ಧಿಕಾರಿ ಕೆ.ಎಸ್. ಸುರೇಶ್, ನಾಗಭೂಷಣ, ನಿವೃತ್ತ ಶಿಕ್ಷಕ ಕೆ. ಮಂಜುನಾಥ ನಾಯ್ಕ, ಶಿಕ್ಷಕ ಚಂದ್ರ ನಾಯ್ಕ, ವಿಷಯ ಪರಿವೀಕ್ಷಕ ಮಹಲಿಂಗಪ್ಪ ವೇದಿಕೆಯಲ್ಲಿದ್ದರು. ಶಿಕ್ಷಕಿ ಶಿಲ್ಪಾ ಪ್ರಾರ್ಥಿಸಿದರು. ಶಿಕ್ಷಕ ಶ್ರೀನಿವಾಸ ರೆಡ್ಡಿ ಸ್ವಾಗತಿಸಿದರು.