Advertisement

ಶಿಕ್ಷಣದಲ್ಲಿ ಹಿಂದಿ ಹೇರಿಕೆ ಮಾಡುವ ಉದ್ದೇಶ ಕೇಂದ್ರ ಸರಕಾರ ಹೊಂದಿಲ್ಲ: ಧರ್ಮೇಂದ್ರ ಪ್ರಧಾನ್‌

09:10 AM Oct 16, 2022 | Team Udayavani |

ಮಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ಶಿಕ್ಷಣದಲ್ಲಿ ಹಿಂದಿ ಹೇರಿಕೆ ಇಲ್ಲ. ಇಂತಹ ಯಾವುದೇ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿಲ್ಲ ಮತ್ತು ಇಂತಹ ತಪ್ಪು ಅಭಿಪ್ರಾಯಗಳು ಸರಿಯಲ್ಲ ಎಂದು ಕೇಂದ್ರ ಶಿಕ್ಷಣ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

Advertisement

ಎನ್‌ಐಟಿಕೆ ಸುರತ್ಕಲ್‌ನಲ್ಲಿ ನಿರ್ಮಿಸಿರುವ ಕೇಂದ್ರೀಯ ಸಂಶೋಧ್ಜ ಸೌಲಭ್ಯ (ಸಿಆರ್‌ಎಫ್‌) ಹಾಗೂ ಸ್ಕೂಲ್‌ ಆಫ್‌ ಇಂಟರ್‌ ಡಿಸಿಪ್ಲಿನರಿ ಸ್ಟಡೀಸ್‌ ಉದ್ಘಾಟಿಸಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಮಗೆ ಎಲ್ಲ ಪ್ರಾದೇಶಿಕ ಭಾಷೆಗಳು ಕೂಡ ರಾಷ್ಟ್ರೀಯ ಭಾಷೆಗಳಾಗಿವೆ. ಎನ್‌ಇಪಿಯಲ್ಲಿ ತಾಂತ್ರಿಕ ಹಾಗೂ ಉನ್ನತ ಶಿಕ್ಷಣ ಸೇರಿದಂತೆ ಎಲ್ಲ ಶಿಕ್ಷಣ ಹಂತಗಳಲ್ಲಿ ಎಲ್ಲ ರಾಜ್ಯಗಳ ಸ್ಥಳೀಯ ಮಾತೃಭಾಷೆಗೆ ಆದ್ಯತೆ ನೀಡಲಾಗಿದೆ. ಕನ್ನಡವೂ ಸೇರಿದಂತೆ 8 ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಠ್ಯಗಳನ್ನು ಸಿದ್ಧಪಡಿಸುವ ಪ್ರಕ್ರಿಯೆ ನಡೆದಿದೆ. ಮಧ್ಯಪ್ರದೇಶವು ಹಿಂದಿಯಲ್ಲೇ ವೈದ್ಯಕೀಯ, ಕಾನೂನು, ತಾಂತ್ರಿಕ ಶಿಕ್ಷಣ ನೀಡಲಿದೆ ಎಂದರು.

ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದು ಮೂರುವರ್ಷಗಳಾಗಿವೆ. ಎಲ್ಲ ರಾಜ್ಯಗಳೂ ಶಿಕ್ಷಣ ಸಂಸ್ಥೆಗಳು ಇದನ್ನು ಸ್ವಾಗತಿಸಿವೆ ಆದರ ಆರಂಭದ ಎರಡು ವರ್ಷಗಳಲ್ಲಿ ಕೊರೊನಾದಿಂದಾಗಿ ನಿಗದಿತ ಮಟ್ಟದಲ್ಲಿ ಪ್ರಗತಿ ಸಾಧ್ಯವಾಗಲಿಲ್ಲ. ಇದೀಗ ಪ್ರಾಥಮಿಕ ಶಾಲೆಯಿಂದ ಸಂಶೋಧನ ತರಗತಿ ತನಕ ತೃಪ್ತಿಕರವಾಗಿ ಜಾರಿಯಾಗುತ್ತಿದೆ ಎಂದು ಹೇಳಿದರು.

ಹೊರದೇಶಗಳಲ್ಲಿ ಐಐಟಿ
ಐಐಟಿ ಮತ್ತು ಐಐಐಟಿಗಳು ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ, ಜ್ಞಾನ ದೇಗುಲಗಳು. ಉತ್ಕೃಷ್ಟ ಗುಣಮಟ್ಟದ ಶಿಕ್ಷಣದಿಂದ ವಿಶ್ವದ‌ ಗಮನಸೆಳೆದಿದೆ. ಈಗಾಗಲೇ 10ಕ್ಕೂ ಅಧಿಕ ದೇಶಗಳಲ್ಲಿ ಐಐಟಿಗಳ ಸ್ಥಾಪನೆಗೆ ಕೋರಿಕೆ ಬಂದಿದ್ದು ಪೂರಕ ಪ್ರಕ್ರಿಯೆಗಳು ನಡೆಯುತ್ತಿವೆ. ಕೇಂದ್ರ ಶಿಕ್ಷಣ ಸಚಿವಾಲಯದ ನೆರವಿನಿಂದ ಹೊರದೇಶಗಳಲ್ಲಿ ಐಐಟಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಡಾ| ಭರತ್‌ ಶೆಟ್ಟಿ, ವೈ.ಎ. ನಾರಾಯಣಸ್ವಾಮಿ, ಎನ್‌ಐಟಿಕೆ ನಿರ್ದೇಶಕ ಪ್ರೊ| ಪ್ರಸಾದ್‌ ಕೃಷ್ಣ, ಕುಲಸಚಿವ ಪ್ರೊ| ಕೆ. ರವೀಂದ್ರನಾಥ್‌, ಕೇಂದ್ರೀಯ ಸಂಶೋಧನ ಸೌಲಭ್ಯದ ಅಧ್ಯಕ್ಷ ಪ್ರೊ| ಎಂ.ಎನ್‌. ಸತ್ಯನಾರಾಯಣ ಉಪಸ್ಥಿತರಿದ್ದರು.

ಕೇಂದ್ರೀಯ ಸಂಶೋಧನ ಸೌಲಭ್ಯ
ತಾಂತ್ರಿಕ ಶಿಕ್ಷಣ, ತರಬೇತಿ, ಸಂಶೋಧನೆ ಅಭಿವೃದ್ಧಿ ಮತ್ತು ನಾವೀನ್ಯಗಳಲ್ಲಿ ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಎನ್‌ಐಟಿಕೆಯಲ್ಲಿ ಭಾರತ ಸರಕಾರದ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಯಿಂದ 80 ಕೋ.ರೂ. ಸಾಲ ನೆರವಿನೊಂದಿಗೆ ಕೇಂದ್ರೀಯ ಸಂಶೋಧನ ಸೌಲಭ್ಯ (ಸಿಆರ್‌ಎಫ್‌) ಸ್ಥಾಪಿಸಲಾಗಿದೆ. ಬಾಹ್ಯಾಕಾಶ ತಂತ್ರಜ್ಞಾನ, ಆಟೋಮೊಬೈಲ್‌, ಸಂಯೋಜಕ ಉತ್ಪಾದನೆ, ಜಲಶುದ್ಧೀಕರಣ, ನ್ಯಾನೋ ತಂತ್ರಜ್ಞಾನ, ಔಷಧ ಮತ್ತು ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಕೈಗಾರಿಕೆ ಮತ್ತು ಶೈಕ್ಷಣಿಕ ಸಂಶೋಧನ ಸಹಯೋಗಗಳನ್ನು ತೆರೆಯುವ 75ಕ್ಕೂ ಹೆಚ್ಚು ಉನ್ನತ ಮಟ್ಟದ ಸಂಶೋಧನಾ ಮಾರ್ಗದರ್ಶಿ ಸಾಧನಗಳನ್ನು ಸಿಆರ್‌ಎಫ್‌ನಲ್ಲಿರುವ ಕೇಂದ್ರಗಳು ಹೊಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next