ಉಡುಪಿ: ಬೆಳಗಾವಿಯಲ್ಲಿ ಎಂಇಎಸ್ ಕನ್ನಡ ವಿರೋಧಿ ಚಟುವಟಿಕೆ ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ. ಜಿಲ್ಲಾಡಳಿತ, ಗೃಹ ಇಲಾಖೆ ಕಠಿನ ಕ್ರಮ ತೆಗೆದುಕೊಳ್ಳಲಿದೆ. ಹಿಂದಿ ಭಾಷೆ ಹೇರಿಕೆ ಎಂಬುದಿಲ್ಲ, ಹಿಂದಿ ಅನ್ಯ ರಾಜ್ಯದವರೊಂದಿಗೆ ವ್ಯವಹರಿಸಲು ಸಂಪರ್ಕ ಭಾಷೆಯಾಗಿ ಬಳಸುವ ಬಗ್ಗೆೆ ಹೇಳಲಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಪ್ರಾಧಾನ್ಯ, ಕನ್ನಡಕ್ಕೆ ದಕ್ಕೆೆಯಾದರೆ ಸಹಿಸುವುದಿಲ್ಲ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಆಜಾನ್ ಮೊಳಗುವ ಮಸೀದಿ ಎದುರು ಭಜನೆ ನಡೆಸುವ ಹಿಂದೂಪರ ಸಂಘಟನೆಗಳ ನಿಲುವಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು. ಮಸೀದಿ ಆಜಾನ್‌ಗೆ ಸಂಬಂಧಿಸಿ ನ್ಯಾಯಾಲಯ ನೀಡಿರುವ ತೀರ್ಪಿಗೆ ಸರಕಾರ ಬದ್ಧವಾಗಿದೆ. ಶಾಂತಿ ಸುವ್ಯವಸ್ಥೆೆಗೆ ಧಕ್ಕೆ ಬಾರದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಗಾಳಿಯಲ್ಲಿ ಗುಂಡು ಹಾರಿಸುವ ಪ್ರಿಯಾಂಕ
ಪಿಎಸ್‌ಐ ಪ್ರಶ್ನೆೆಪತ್ರಿಕೆ ಅಕ್ರಮಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಿಯಾಂಕ ಖರ್ಗೆ ಅವರು ಗಾಳಿಯಲ್ಲಿ ಗುಂಡು ಹಾರಿಸುವುದು ಮಾತ್ರ. ಅವರಲ್ಲಿ ಪ್ರಕರಣಕ್ಕೆೆ ಸಂಬಂಧಿಸಿ ಸ್ಪಷ್ಟತೆ ಇಲ್ಲ. ಬಿಟ್‌ಕಾಯಿನ್ ವಿಷಯದಲ್ಲಿ ಸಾಕಷ್ಟು ವಿಫಲ ಪ್ರಯತ್ನಗಳನ್ನು ನಡೆಸಿದರು. ಈಗ ಪಿಎಸ್‌ಐ ಅಕ್ರಮ ವಿಷಯದಲ್ಲಿಯೂ ಹೀಗೆ ಮಾಡುತ್ತಿದ್ದಾರೆ. ಸಿಐಡಿ ನೋಟಿಸ್‌ಗೆ ಉತ್ತರ ಕೊಡದೆ ಪಲಾಯನವಾದ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ರಾಜ್ಯದ ಇನ್ನೂ 20 ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಜನರು ಬೇಡಿಕೆ ಇಡುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕಳೆದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಅವರು ಕಷ್ಟದಿಂದ ಒಂದು ಕ್ಷೇತ್ರದಲ್ಲಿ ಗೆದ್ದಿದ್ದಾರೆ ಎಂದರು. ಬಿಜೆಪಿ ಸಂಘಟನೆಯಲ್ಲಿ ಹೊಸತನ ನಿರಂತರ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತನು ಸಮಾಜಕ್ಕೆ ಪೂರಕವಾಗುವಂತ ಆಲೋಚನೆಯೊಂದಿಗೆ ಪಕ್ಷ ಸಂಘಟನೆಯೊಂದಿಗೆ ತೊಡಗಿಸಿಕೊಳ್ಳುತ್ತಾರೆ ಎಂದರು.