ನವದೆಹಲಿ: ಶಿಕ್ಷಣ ಕ್ಷೇತ್ರದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಎತ್ತಿದ್ದ ವಿರೋಧದ ಧ್ವನಿಗೆ ಹಾಗೂ ಭಾಷಾ ಸ್ವಾಭಿಮಾನಕ್ಕೆ ಜಯ ಸಿಕ್ಕಿದೆ. 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ಹಿಂದಿ ಭಾಷಿಗರು ಇಲ್ಲದ ಪ್ರಾಂತ್ಯಗಳಲ್ಲೂ ತ್ರಿಭಾಷಾ ಸೂತ್ರದಡಿ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸುವಂತೆ ಮಾಡಲಾಗಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ.
ಹೊಸ ಕರಡಿನಲ್ಲಿ ‘ತ್ರಿಭಾಷಾ ಸೂತ್ರ’ವನ್ನು ಹಾಗೇ ಉಳಿಸಿಕೊಳ್ಳಲಾಗಿದೆಯಾದರೂ, ‘ಮೂರು ಭಾಷೆಗಳನ್ನು ಕಲಿಯುವ ಯಾವುದೇ ವಿದ್ಯಾರ್ಥಿ, 6ನೇ ಅಥವಾ 7ನೇ ತರಗತಿಗೆ ಬಂದಾಗ ಒಂದು ಅಥವಾ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬದಲಾಯಿಸಬಹುದು. ಹೊಸ ಭಾಷೆಗಳ ಆಯ್ಕೆಯ ವೇಳೆ, ಹಿಂದಿ ಸೇರಿದಂತೆ ಭಾರತದ ಯಾವುದೇ ಪ್ರಾಂತೀಯ ಭಾಷೆಯನ್ನು ಆ ವಿದ್ಯಾರ್ಥಿ ಆಯ್ಕೆ ಮಾಡಿಕೊಳ್ಳಬಹುದು’ ಎಂದು ತಿದ್ದುಪಡಿಯಲ್ಲಿ ಉಲ್ಲೇಖೀಸಲಾಗಿದೆ.
ಭುಗಿಲೆದ್ದಿದ್ದ ಅಸಮಾಧಾನ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನೇತೃತ್ವದ ಸಮಿತಿ ರೂಪಿಸಿದ್ದ 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಶುಕ್ರವಾರ ಪ್ರಕಟಗೊಂಡಿತ್ತು. ಇದರ ಬೆನ್ನಲ್ಲೇ ತಮಿಳುನಾಡಿನಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಲ್ಲಿರುವ ಎಐಎಡಿಎಂಕೆ, ಪಿಎಂಕೆ ಹಾಗೂ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಡಿಎಂಕೆ, ಕರಡು ಪ್ರತಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದವು. ಅತ್ತ, ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್‌ಎಸ್) ನಾಯಕ ಅನಿಲ್ ಶಿದೋರೆ ಅವರೂ ಕೇಂದ್ರದ ನಡೆಗೆ ವಿರುದ್ಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರಲ್ಲದೆ, ‘ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ಹಾಗಾಗಿ, ನಮ್ಮ ಮೇಲೆ ಹಿಂದಿ ಹೇರುವ ಪ್ರಯತ್ನಗಳು ಸಲ್ಲದು’ ಎಂದಿದ್ದರು.
ಸ್ಪಷ್ಟನೆ ಹೊರತಾಗಿಯೂ ತಿದ್ದುಪಡಿ: ಹೊಸ ಶಿಕ್ಷಣ ನೀತಿಯ ವಿರುದ್ಧ ವಿರೋಧ ಭುಗಿಲೇಳುತ್ತಲೇ ಸ್ಪಷ್ಟನೆ ನೀಡಿದ್ದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್, ”ಇದು ತಜ್ಞರ ಸಮಿತಿಯು ತಯಾರಿಸಿರುವ ಕರಡು ಪ್ರತಿಯಾಗಿದ್ದು, ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದು ಸೂಕ್ತ ತಿದ್ದುಪಡಿ ಮಾಡಿದ ನಂತರವಷ್ಟೇ ಕೇಂದ್ರಕ್ಕೆ ಸಲ್ಲಿಸುತ್ತೇವೆ. ಯಾವುದೇ ಭಾಷೆಯನ್ನು ಯಾರ ಮೇಲೂ ಬಲವಂತವಾಗಿ ಹೇರುವ ಇರಾದೆ ಸರ್ಕಾರಕ್ಕಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ಸಚಿವರ ಸ್ಪಷ್ಟನೆಯ ಹೊರತಾಗಿಯೂ, ತನ್ನ ಕರಡಿನಲ್ಲಿ ತಿದ್ದುಪಡಿ ತರುವ ಮೂಲಕ ಅಸಮಾಧಾನವನ್ನು ತಗ್ಗಿಸಲು ಕೇಂದ್ರ ಪ್ರಯತ್ನಿಸಿದೆ.
ದಕ್ಷಿಣ ರಾಜ್ಯಗಳಿಂದ ಸ್ವಾಗತ: ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವುದನ್ನು ತಮಿಳುನಾಡು, ತೆಲಂಗಾಣ ಸೇರಿದಂತೆ ದಕ್ಷಿಣದ ರಾಜ್ಯಗಳು ಸ್ವಾಗತಿಸಿವೆ. ‘ಇದು ಡಿಎಂಕೆ ಸಂಸ್ಥಾಪಕ ಎಂ. ಕರುಣಾನಿಧಿಯವರ ಹಿಂದಿ ಹೇರಿಕೆ ವಿರುದ್ಧದ ಹೋರಾಟಕ್ಕೆ ಸಂದ ಜಯ. ಕೇಂದ್ರದ ಕ್ರಮ, ಕರುಣಾನಿಧಿಯವರು ಇನ್ನೂ ನಮ್ಮ ನಡುವೆ ಜೀವಂತವಾಗಿದ್ದಾರೆಂಬ ಭಾವವನ್ನು ತಂದಿದೆ’ ಎಂದು ಡಿಎಂಕೆ ಹೇಳಿದೆ. ಇನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು, ‘ಒಂದು ಸುಂದರ ಪರಿಹಾರ. ತಮಿಳುನಾಡಿನಲ್ಲಿ ಹಿಂದಿ ಕಡ್ಡಾಯವಲ್ಲ. ಕರಡು ನೀತಿಗೆ ತಿದ್ದುಪಡಿ ತರಲಾಯಿತು’ ಎಂದು ಟ್ವೀಟ್ ಮಾಡಿ, ಅದರಲ್ಲಿ ತ್ರಿವರ್ಣ ಧ್ವಜ ಮತ್ತು ಗುಲಾಬಿ ಹೂವಿನ ಇಮೋಜಿ ಹಾಕುವ ಮೂಲಕ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ತೆಲಂಗಾಣದ ಕಾಂಗ್ರೆಸ್ ನಾಯಕರು, ಬಿಜೆಪಿ ಮಿತ್ರಪಕ್ಷ ಪಿಎಂಕೆ ನಾಯಕರು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ.
ಯಾವುದೇ ಭಾಷೆಯನ್ನು ಸಮಿತಿ ಕಡ್ಡಾಯಗೊಳಿಸಿಲ್ಲ. ಈ ಸೂಕ್ಷ್ಮ ಅಂಶವನ್ನು ನಾವು ಮೊದಲೇ ಗಮನಿಸಿದ್ದೇವೆ.
-ಡಾ.ಕಸ್ತೂರಿರಂಗನ್, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷ
ಹಿಂದಿ ಹೇರಿಕೆ ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚೆ ನಡೆಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆಯುತ್ತೇವೆ.
– ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ
ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕು. ಹಿಂದಿ ಭಾಷಿಕರಲ್ಲದವರ ಮೇಲೆ ಅದರ ಹೇರಿಕೆ ಸಲ್ಲದು. ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂಬುದು ನನ್ನ ಭಾವನೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ