ಗೋಕಾಕ: ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮುನ್ನೋಳಕರ್ ನೇತೃತ್ವದಲ್ಲಿ 12 ಜನ ಗುತ್ತಿಗೆದಾರರು ನಗರದಲ್ಲಿ ಶಾಸಕ ರಮೇಶ ಜಾರಕಿಹೋಳಿ ಅವರನ್ನು ಸೋಮವಾರ ಭೇಟಿ ಮಾಡಿ ಕಾಮಗಾರಿ ಮಾಡಿರುವ ನಮ್ಮ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವಂತೆ ಮನವಿ ಮಾಡಿದ್ದಾರೆ.
ಕೋಟ್ಯಂತರ ರೂ. ಹಾಕಿ ಕಾಮಗಾರಿ ಮಾಡಿ ಹಣ ಬಾರದ ಹಿನ್ನೆಲೆಯಲ್ಲಿ ಕಂಗಾಲಾಗಿರುವ ಗುತ್ತಿಗೆದಾರರು ಶಾಸಕ ರಮೇಶ ಜತೆ ಕೆಲ ಗಂಟೆಗಳ ಕಾಲ ಚರ್ಚೆ ನಡೆಸಿ, ಸಂತೋಷ್‌ಗೆ ಹಣ ನೀಡಿರುವುದು ಹಾಗೂ ಲಕ್ಷ್ಮೀ ಹೆಬ್ಟಾಳಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮುನ್ನೋಳಕರ್, ಒಂದೂವರೆ ವರ್ಷದ ಹಿಂದೆ ನಾನು ಮತ್ತು ಸದಸ್ಯರು ಸೇರಿ ಅಂದಿನ ಉಸ್ತುವಾರಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದೆವು. 100 ವರ್ಷಕ್ಕೊಮ್ಮೆ ಲಕ್ಷ್ಮೀ ದೇವಿ ಜಾತ್ರೆ ನಡೆಯುತ್ತಿದ್ದು, ಗ್ರಾಮದ ಅಭಿವೃದ್ಧಿಗೆ ಮನವಿ ಮಾಡಿದ್ದೆವು. ಅದರಂತೆ ಗುತ್ತಿಗೆದಾರ ಸಂತೋಷ ಪಾಟೀಲ್‌ಗೆ ನಮ್ಮ ಗ್ರಾಪಂ ಪತ್ರ ನೀಡಿದ್ದೆ. ಸಂತೋಷ ಜತೆ ಎರಡು ಬಾರಿ ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದೆ. ನನಗೆ ಕನ್ನಡ ಚೆನ್ನಾಗಿ ಬಾರದ ಕಾರಣ ಸಂತೋಷ ಅವರು ಈಶ್ವರಪ್ಪ ಜತೆ ಮಾತನಾಡಿದರು. ಶೇ.40 ಕಮಿಷನ್ ಕುರಿತು ಆ ಸಂದರ್ಭದಲ್ಲಿ ಯಾವುದೇ ಮಾತುಕತೆ ನಡೆದಿರಲಿಲ್ಲ. ಮೃತ ಸಂತೋಷ ಕಾಮಗಾರಿ ಮಾಡಿದ ಹಣ ಬಿಡುಗಡೆಗೆ ಸಬ್ ಗುತ್ತಿಗೆದಾರರಿಂದ ಹಣ ಪಡೆದಿರುವುದು ಗೊತ್ತಿರಲಿಲ್ಲ. ಎಲ್ಲ ಗುತ್ತಿಗೆದಾರಿಂದ ಬಿಲ್ ಬಿಡುಗಡೆಗೆಂದು ಸಂತೋಷ ಪಾಟೀಲ್ 98 ಲಕ್ಷ ರೂ. ಪಡೆದಿದ್ದಾರೆ ಎಂದರು.
ಒಮ್ಮೆ ಸಂತೋಷ ಪಾಟೀಲ್ ಅವರು ಕೆಲಸ ಮಾಡುವ ವಿಚಾರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ತೊಂದರೆ ನೀಡುತ್ತಿದ್ದಾರೆ ಎಂದಿದ್ದರು. ಅಲ್ಲದೇ ಬಿಜೆಪಿ ಜನ ಕಾಮಗಾರಿ ಮಾಡುತ್ತಿದ್ದಾರೆಂದು ಶಾಸಕಿ ಲಕ್ಷ್ಮೀ ಹೆಬ್ಟಾಳಕರ್ ನಮಗೆ ವಿರೋಧ ಮಾಡಿದ್ದರು. ಇದರ ಜತೆಗೆ ಆಫೀಸರ್ ಗಳಿಗೂ ಫೋನ್ ಮಾಡಿ ಕೆಲಸ ನಿಲ್ಲಿಸಲು ಹೇಳಿದ್ದರು ಎಂದು ಆರೋಪಿಸಿದರು.
ಸಂತೋಷ ಪಾಟೀಲ್ ಜೀವಂತ ಇದ್ದಾಗ ಲಕ್ಷ್ಮೀ ಹೆಬ್ಟಾಳಕರ್ ಎಲ್ಲಿದ್ದರು? ಕಾಮಗಾರಿ ಬಿಲ್‌ಗಾಗಿ ಪರದಾಡುತ್ತಿದ್ದಾಗ ಸಪೋರ್ಟ್ ಮಾಡದ ಹೆಬ್ಟಾಳಕರ್ ಸಂತೋಷ ಪಾಟೀಲ ಮರಣದ ನಂತರ ಸ್ಟಂಟ್ ಮಾಡುವ ಅವಶ್ಯಕತೆ ಏನಿದೆ? ಅವರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆದಾಗ ಸಪೋರ್ಟ್ ಮಾಡಬೇಕಿತ್ತು. ಸಪೋರ್ಟ್ ಮಾಡಿದ್ದರೆ ಸಂತೋಷ ಪಾಟೀಲ್ ಜೀವಂತವಾಗಿರುತ್ತಿದ್ದರು. ಅಲ್ಲದೇ ಲಕ್ಷ್ಮೀ ಹೆಬ್ಟಾಳ್ಕರ್ ನನ್ನ ಸಂಬಂಧಿ ಅಂತಲೂ ಸಂತೋಷ ಪಾಟೀಲ್ ನನಗೆ ಹೇಳುತ್ತಿದ್ದರು ಎಂದರು.
ಹಿಂಡಲಗಾ ಗ್ರಾಮದ ಗುತ್ತಿಗೆದಾರ ಬಾಲಕೃಷ್ಣ ದಂಡಗಲಕರ್ ಮಾತನಾಡಿ, ಹಿಂಡಲಗಾದಲ್ಲಿ ನಾನು ಒಟ್ಟು 37 ಲಕ್ಷ ಮೊತ್ತದ ಕಾಮಗಾರಿ ಮಾಡಿದ್ದೇನೆ. ಸಂತೋಷ ಪಾಟೀಲ ಬಿಲ್ ಕೊಡಲು ಇಂದು-ನಾಳೆ ಎಂದು ಹೇಳುತ್ತಿದ್ದರು. ವರ್ಕ್ ಆರ್ಡರ್ ಸರ್ಟಿಫಿಕೇಟ್ ನನ್ನ ಬಳಿ ಇದೆ ಎಂದಿದ್ದರು. ಬಿಲ್ ಬಿಡುಗಡೆ ಮಾಡಿಸಿಕೊಂಡು ಬರಲು 3 ಲಕ್ಷ ರೂ. ಕೊಟ್ಟಿದ್ದೇನೆ ಎಂದರು.
ಗುತ್ತಿಗೆದಾರ ಸುನೀಲ್ ಚೌಗಲೆ ಮಾತನಾಡಿ, ನಾನು 47 ಲಕ್ಷ ಮೊತ್ತದ ಕಾಮಗಾರಿ ಮಾಡಿದ್ದೇನೆ. ಬಿಲ್ ತೆಗೆದುಕೊಡುವುದಾಗಿ 10.15 ಲಕ್ಷ ತೆಗೆದುಕೊಂಡಿದ್ದಾನೆ. ವರ್ಕ್ ಆರ್ಡರ್ ನಮಗೆ ತೋರಿಸಿಲ್ಲ. ನಮ್ಮ ಬಳಿ ಇದೆ ಅಂತ ಹೇಳಿದ್ದರು. ನಾವು ಸಚಿವ ಈಶ್ವರಪ್ಪ ಭೇಟಿ ಮಾಡಿಲ್ಲ, ಸಂತೋಷ ಪಾಟೀಲ್ ವಿಶ್ವಾಸದ ಮೇಲೆ ಕೆಲಸ ಮಾಡಿದ್ದೇನೆ. ಅಲ್ಲದೇ ದುಡ್ಡಿಗಾಗಿ ನಾವು ಸಂತೋಷ ಪಾಟೀಲ್‌ಗೆ ಟಾರ್ಚರ್ ಮಾಡಿಲ್ಲ. ಈಗ ಸಂತೋಷ ಪಾಟೀಲ ಮೃತಪಟ್ಟಿದ್ದಾರೆ. ನಮ್ಮ ಹಣ ಕೊಡುವವರು ಯಾರು ಎನ್ನುವ ಸಮಸ್ಯೆ ಕಾಡುತ್ತಿದೆ ಎಂದರು.
ಮತ್ತೋರ್ವ ಗುತ್ತಿಗೆದಾರ ರಾಜು ಜಾಧವ ಮಾತನಾಡಿ, ನಾನು 27 ಲಕ್ಷ ರೂ. ರಸ್ತೆ ಕಾಮಗಾರಿ ಮಾಡಿದ್ದೇನೆ. ಕೆಲಸ ಮುಗಿಸಿ ಒಂದು ತಿಂಗಳಲ್ಲಿ ನಿಮ್ಮ ಪೇಮೆಂಟ್ ಸಿಗುತ್ತದೆ ಎಂದು ಸಂತೋಷ ಹೇಳಿದ್ದರು. ಆದರೆ ಕೆಲಸ ಮುಗಿದು ಒಂದು ವರ್ಷ ಆಯ್ತು, ಇದುವರೆಗೆ ಬಿಲ್ ಆಗಿಲ್ಲ. ಇಂದು, ನಾಳೆ, ಅಲ್ಲಿ ಅಮೌಂಟ್ ಕೊಡಬೇಕು, ಇಲ್ಲಿ ಕೊಡಬೇಕೆಂದು ಸಂತೋಷ ಪಾಟೀಲ ಹೇಳುತ್ತಿದ್ದರು. ಹಣ ಬಿಡುಗಡೆ ಮಾಡಿಸಿಕೊಂಡು ಬರುವಂತೆ ಹೆಚ್ಚುವರಿ ಮೂರು ಲಕ್ಷ ರೂ. ನೀಡಿದ್ದೇನೆ ಎಂದು ಅಳಲು ತೋಡಿಕೊಂಡರು.