ನವದೆಹಲಿ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ(ಅ.14) ಘೋಷಿಸಿದೆ. ನವೆಂಬರ್ 12ರಂದು ಒಂದೇ ಹಂತದಲ್ಲಿ ಹಿಮಾಚಲ ಪ್ರದೇಶದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ:ಚರ್ಮಗಂಟು ರೋಗ ನಿರ್ವಹಣೆಗೆ 13 ಕೋಟಿ ಬಿಡುಗಡೆಗೆ ಸಿಎಂ ಬೊಮ್ಮಾಯಿ ಆದೇಶ
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಪಾರದರ್ಶಕವಾಗಿ ಚುನಾವಣೆ ನಡೆಸುವುದು ನಮ್ಮ ಕರ್ತವ್ಯವಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಆಯೋಗ ಎಲ್ಲಾ ರೀತಿಯ ಸಿದ್ಧತೆ ನಡೆಸಲಿದೆ ಎಂದರು.ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ನೀಡಲಾಗುವುದು. ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ರಾಜೀವ್ ಕುಮಾರ್ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಹಿಮಾಚಲ ಪ್ರದೇಶ:
ಅಕ್ಟೋಬರ್ 17ರಂದು ಅಧಿಸೂಚನೆ ಪ್ರಕಟ. ಅಕ್ಟೋಬರ್ 25 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅಕ್ಟೋಬರ್ 27ರಂದು ನಾಮಪತ್ರ ಪರಿಶೀಲನೆ. ಅಕ್ಟೋಬರ್ 29 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ನವೆಂಬರ್ 12ರಂದು ಮತದಾನ. ಡಿಸೆಂಬರ್ 08ರಂದು ಮತ ಎಣಿಕೆ ನಡೆಯಲಿದೆ.
ಹಿಮಾಚಲ ಪ್ರದೇಶದ ವಿಧಾನಸಭೆಯ ಅವಧಿ 2023ರ ಜನವರಿ 8ರಂದು ಅಂತ್ಯಗೊಳ್ಳಲಿದೆ.ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಇತ್ತೀಚೆಗೆ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಟಿ ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಹಿಮಾಚಲ ಪ್ರದೇಶ ವಿಧಾನಸಭೆ 68 ಸದಸ್ಯ ಬಲ ಹೊಂದಿದ್ದು, ಬಹುಮತಕ್ಕೆ 35 ಸ್ಥಾನಗಳ ಅಗತ್ಯವಿದೆ.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಗೆಲುವು ಗಳಿಸಿ ಅಧಿಕಾರ ಹಿಡಿದಿತ್ತು. ಕಾಂಗ್ರೆಸ್ 21 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇಂದು ಗುಜರಾತ್ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಎರಡು ರಾಜ್ಯಗಳ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.