ಜೈಪುರ: ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ರಿಷಿ ಧವನ್ ನಾಯಕತ್ವದ ಹಿಮಾಚಲ ಪ್ರದೇಶ ತಂಡ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಬಲಿಷ್ಠ ತಮಿಳುನಾಡು ವಿರುದ್ಧದ ಫೈನಲ್ ಪಂದ್ಯ ಗೆದ್ದ ಹಿಮಾಚಲ ಪ್ರದೇಶ ದೇಶಿ ಕ್ರಿಕೆಟ್ ನಲ್ಲಿ ತನ್ನ ಚೊಚ್ಚಲ ಟ್ರೋಫಿ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು ತಂಡ 49.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 314 ರನ್ ಗಳಿಸಿ ದೊಡ್ಡ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನತ್ತಿದ ಹಿಮಾಚಲ ಪ್ರದೇಶ ತಂಡ 47.3 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿದ್ದ ವೇಳೆ ಪಂದ್ಯಕ್ಕೆ ಮಂದ ಬೆಳಕು ಅಡ್ಡಿಯಾಯಿತು. ಈ ವೇಳೆ ಪಂದ್ಯ ಅಂತ್ಯಗೊಳಿಸಿದ ಅಂಪೈರ್ ಗಳು ವಿಜೆಡಿ ನಿಯಮದ ಪ್ರಕಾರ ಹಿಮಾಚಲ ಪ್ರದೇಶ 11 ರನ್ ಅಂತರದ ಗೆಲುವು ಸಾಧಿಸಿತು ಎಂದು ಘೋಷಿಸಿದರು.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ತಮಿಳುನಾಡು ತಂಡ ಉತ್ತಮ ಆರಂಭವನ್ನೇನು ಪಡೆಯಲಿಲ್ಲ. 40 ರನ್ ಆಗುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆದರೆ ಐದನೇ ವಿಕೆಟ್ ಗೆ ಜೊತೆಯಾದ ದಿನೇಶ್ ಕಾರ್ತಿಕ್ ಮತ್ತು ಇಂದ್ರಜಿತ್ 202 ರನ್ ಜೊತೆಯಾಟವಾಡಿದರು. ಕಾರ್ತಿಕ್ ಶತಕ (116 ರನ್) ಬಾರಿಸಿ ಮಿಂಚಿದರೆ, ಇಂದ್ರಜಿತ್ 80 ರನ್ ಗಳಿಸಿದರು. ಕೊನೆಯಲ್ಲಿ ಶಾರುಖ್ ಖಾನ್ ಕೇವಲ 21 ಎಸೆತದಲ್ಲಿ 42 ರನ್ ಗಳಿಸಿ ತಂಡದ ಮೊತ್ತ 300 ರ ಗಡಿ ದಾಟುವಂತೆ ಮಾಡಿದರು. ಹಿಮಾಚಲ ಪ್ರದೇಶ ಪರ ಪಂಕಜ್ ಜೈಸ್ವಾಲ್ ನಾಲ್ಕು ವಿಕೆಟ್ ಕಿತ್ತರೆ, ನಾಯಕ ರಿಷಿ ಧವನ್ ಮೂರು ವಿಕೆಟ್ ಪಡೆದರು.
ಇದನ್ನೂ ಓದಿ:ಇಂದಿನಿಂದ ಹರಿಣಗಳ ಚಾಲೆಂಜ್: ಟಾಸ್ ಗೆದ್ದ ಭಾರತ; ಅಯ್ಯರ್, ವಿಹಾರಿಗಿಲ್ಲ ಜಾಗ
ಕಠಿಣ ಗುರಿ ಬೆನ್ನತ್ತಿದ ಹಿಮಾಚಲ ಪ್ರದೇಶಕ್ಕೆ ಶುಭಮ್ ಅರೋರಾ ಮತ್ತು ಅಮಿತ್ ಕುಮಾರ್ ನೆರವಾದರು. ಅರೋರಾ ಅಜೇಯ 136 ರನ್ ಗಳಿಸಿದರೆ, ಅಮಿತ್ 74 ರನ್ ಗಳಿಸಿದರು. ಕೊನೆಯಲ್ಲಿ ನಾಯಕ ರಿಷಿ ಧವನ್ ಕೇವಲ 23 ಎಸೆತಗಳಿಂದ 42 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿದ್ದ ತಮಿಳುನಾಡು ವಿಜಯ್ ಹಜಾರೆ ಟ್ರೋಫಿ ಫೈನಲ್ ನಲ್ಲಿ ಸೋಲುನುಭವಿಸಿತು. ಮತ್ತೊಂದೆಡೆ ಹಿಮಾಚಲ ಪ್ರದೇಶ ತಂಡವು ತನ್ನ ಚೊಚ್ಚಲ ಕಪ್ ಗೆದ್ದು ಸಂಭ್ರಮಿಸಿತು.