Advertisement
ರಾಜ್ಯಸಭೆ ಚುನಾವಣೆಯ ಹೈಡ್ರಾಮ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ವಾಪಸ್ ಪಡೆದಿದ್ದ ವಿಕ್ರಮಾದಿತ್ಯ 2 ದಿನಗಳ ದೆಹಲಿ ಭೇಟಿಗೆಂದು ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಭೇಟಿ ಗೆ ತೆರಳುವ ಮುನ್ನ ಚಂಡೀಗಢದಲ್ಲಿ ವಾಸ್ತವ್ಯ ಹೂಡಿರುವ 6 ಅನರ್ಹ ಶಾಸಕರನ್ನು ಗುರುವಾರ ರಾತ್ರಿ ಭೇಟಿಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಈ ಶಾಸಕರು ತಮ್ಮ ಅನರ್ಹತೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಖು ಸಂಪುಟದ ಒಬ್ಬ ಹಿರಿಯ ಸಚಿವ ಹಾಗೂ ಕಾಂಗ್ರೆಸ್‌ನ ಇನ್ನೂ ಕೆಲವು ಶಾಸಕರು ಕೂಡ ಚಂಡೀಗಢದಲ್ಲಿ ಈ 6 ಶಾಸಕರನ್ನು ಭೇಟಿಯಾಗಿ ಮಾತನಾಡಿದ್ದಾರೆ.
ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪ್ರತಿಭಾ ಸಿಂಗ್ ಶುಕ್ರವಾರ, ರಾಜ್ಯ ಕಾಂಗ್ರೆಸ್‌ನ ಸಂಘಟನೆಯಲ್ಲಿ ಕೆಲವು ನ್ಯೂನತೆಗಳಿವೆ. ನಮ್ಮ ಪಕ್ಷದ ಸಂಘಟನೆಗಿಂತ ಬಿಜೆಪಿ ವ್ಯವಸ್ಥೆಯೇ ಮೇಲು. ಬಿಜೆಪಿ ನಮಗಿಂತ ಚೆನ್ನಾಗಿ ಕೆಲಸ ಮಾಡುತ್ತಿದೆ. ಸಿಎಂ ಸುಖು ರಾಜ್ಯದಲ್ಲಿ ಸಂಘಟನೆ ಬಲಪಡಿಸುವ ಅಗತ್ಯವಿದೆ ಎಂದಿದ್ದಾರೆ. ಅನರ್ಹ ಶಾಸಕರ ನ್ನು ತಮ್ಮ ಪುತ್ರ ವಿಕ್ರಮಾದಿತ್ಯ ಸಿಂಗ್ ಭೇಟಿಯಾಗಿರುವ ವಿಚಾರ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನರ್ಹ ಶಾಸಕರು ಸೇರಿ ಕಾಂಗ್ರೆಸ್‌ನ ಹಲವು ಮುಖಂಡರು ವರ್ಷದಿಂದ ಪ್ರಸ್ತಾಪಿಸುತ್ತಿರುವ ಅಂಶಗಳ ಬಗ್ಗೆ ಚರ್ಚೆ ಮಾಡಿಲ್ಲವೆಂದೂ ಆರೋಪಿಸಿದ್ದಾರೆ. ಅನರ್ಹತೆ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ 6 ಶಾಸಕರ ಮೇಲ್ಮನವಿ
ವಿಪ್ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಅನರ್ಹತೆಗೊಂಡಿರುವ ಕಾಂಗ್ರೆಸ್‌ನ 6 ಶಾಸಕರು ಹಿಮಾಚಲ ಪ್ರದೇಶ ಹೈಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ. ಅನರ್ಹತೆಗೊಳಿಸುವ ಮುನ್ನ ನೋಟಿಸ್ ಉತ್ತರ ನೀಡಲು ಬೇಕಾಗಿರುವ 7 ದಿನಗಳ ನಿಯಮ ಪಾಲನೆ ಮಾಡಿಲ್ಲವೆಂದು ಶಾಸಕರ ಪರ ವಕೀಲ ಸತ್ಯಪಾಲ್ ಜೈನ್ ಆರೋಪಿಸಿದ್ದಾರೆ.