ನವದೆಹಲಿ: ಕಾಂಗ್ರೆಸ್ ಆಡಳಿತಾರೂಢ ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿದ್ದ ಬೆನ್ನಲ್ಲೇ ಹಿಮಾಚಲ ವಿಧಾನಸಭಾ ಸ್ಪೀಕರ್ ಬುಧವಾರ (ಫೆ.28) ಘೋಷಣೆ ಕೂಗಿ, ಅನುಚಿತ ನಡವಳಿಕೆ ಪ್ರದರ್ಶಿಸಿದ 15 ಬಿಜೆಪಿ ಶಾಸಕರನ್ನು ಉಚ್ಚಾಟಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:Pak ಜಿಂದಾಬಾದ್ ಘೋಷಣೆ ಪ್ರಕರಣ: ಪರಿಷತ್ ನಲ್ಲಿ ಕೋಲಾಹಲ, ರವಿಕುಮಾರ್ ಕೆಂಡಾಮಂಡಲ!
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಆರು ಶಾಸಕರು ಅಡ್ಡಮತದಾನ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲ್ಲುವಂತೆ ಮಾಡಿರುವುದು, ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರ ಕೊಠಡಿಯೊಳಗೆ ಘೋಷಣೆ ಕೂಗಿದ 15 ಮಂದಿ ಬಿಜೆಪಿ ಶಾಸಕರನ್ನು ಉಚ್ಛಾಟನೆಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಬಿಜೆಪಿಯ ಶಾಸಕರಾದ ಜೈರಾಮ್ ಠಾಕೂರ್, ವಿಪಿನ್ ಸಿಂಗ್ ಪರ್ಮಾರ್, ರಣಧೀರ್ ಶರ್ಮಾ, ಲೋಕೆಂದರ್ ಕುಮಾರ್, ವಿನೋದ್ ಕುಮಾರ್, ಹನ್ಸ್ ರಾಜ್, ಜನಕ್ ರಾಜ್, ಬಲಬೀರ್ ವರ್ಮಾ, ತ್ರಿಲೋಕ್ ಜಾಮ್ವಾಲ್, ಸುರೇಂದರ್ ಶೋರಿ, ದೀಪ್ ರಾಜ್, ಪುರಾಣ್ ಠಾಕೂರ್, ಇಂದರ್ ಸಿಂಗ್ ಗಾಂಧಿ, ದಿಲೀಪ್ ಠಾಕೂರ್ ಅವರು ಉಚ್ಛಾಟನೆಗೊಂಡಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆರು ಶಾಸಕರು ಅಡ್ಡಮತದಾನ ಮಾಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಪರಾಜಯಗೊಂಡಿದ್ದು, ಬಿಜೆಪಿಯ ಹರ್ಷ ಮಹಾಜನ್ ಗೆಲುವು ಸಾಧಿಸಿದ್ದರು.