ಶಿಮ್ಲಾ: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಅನ್ನಿ ಪ್ರದೇಶದಲ್ಲಿ ಇತ್ತೀಚಿನ ಭಾರೀ ಮಳೆಯ ಪರಿಣಾಮವಾಗಿ ಎಂಟು ಕಟ್ಟಡಗಳು ಗುರುವಾರ ಕುಸಿದಿವೆ. ಇದರಿಂದ ಪ್ರದೇಶದಲ್ಲಿ ಧೂಳು ಆವರಿಸಿದ್ದು, ದೊಡ್ಡ ಪ್ರಮಾಣದ ಅವಶೇಷಗಳು ಉಂಟಾಗಿದೆ. ನಾಲ್ಕು-ಐದು ದಿನಗಳ ಹಿಂದೆ ಅಂಗಡಿಗಳು, ಬ್ಯಾಂಕುಗಳು ಹಾಗೂ ಇತರೆ ವಾಣಿಜ್ಯ ಕಟ್ಟಡಗಳನ್ನು ಒಳಗೊಂಡ ಎಂಟು ಕಟ್ಟಡಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಕಟ್ಟಡಗಳನ್ನು ಅಸುರುಕ್ಷಿತ ಎಂದು ಘೋಷಿಸಿದ ಜಿಲ್ಲಾಡಳಿತ, ಮುಂಜಾಗ್ರತಾ ಕ್ರಮವಾಗಿ ಅಲ್ಲಿದ್ದ ಎಲ್ಲರನ್ನು ಸ್ಥಳಾಂತರಿಸಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ನಷ್ಟದ ಅಂದಾಜು ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ-305ರ ಅನ್ನಿ ಪ್ರದೇಶದ ಕಟ್ಟಡಗಳಲ್ಲಿರುವ ಜನರ ಸ್ಥಳಾಂತರ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಗುರುವಾರವೂ ಭಾರೀ ಮಳೆ ಮುಂದುವರಿದಿದೆ. ಪಲಂಪುರ್‌ದಲ್ಲಿ 137 ಮಿಮೀ, ನಹಾನ್‌ನಲ್ಲಿ 93 ಮಿಮೀ, ಶಿಮ್ಲಾದಲ್ಲಿ 79 ಮಿಮೀ, ಧರ್ಮಶಾಲಾ 70 ಮಿಮೀ ಹಾಗೂ ಮಂಡಿಯಲ್ಲಿ 57 ಮಿಮೀ ಮಳೆಯಾಗಿದೆ. ಮಳೆ ಪರಿಣಾಮವಾಗಿ ಜೂ.24ರಿಂದ ಇಲ್ಲಿಯವರೆಗೆ ಒಟ್ಟು 238 ಮಂದಿ ಮೃತಪಟ್ಟಿದ್ದು, 40 ಮಂದಿ ಕಾಣೆಯಾಗಿದ್ದಾರೆ.
ತಮಿಳುನಾಡಿನಿಂದ 10 ಕೋಟಿ ರೂ.:
ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ನಲಗುತ್ತಿರುವ ಹಿಮಾಚಲ ಪ್ರದೇಶದ ವಿಪತ್ತು ಪರಿಹಾರ ನಿಧಿಗೆ ತಮಿಳುನಾಡು ಸರ್ಕಾರ 10 ಕೋಟಿ ರೂ.ಗಳನ್ನು ನೀಡಿದೆ. ಈ ಹಿಂದೆ ಕರ್ನಾಟಕ, ರಾಜಸ್ಥಾನ ಮತ್ತು ಛತ್ತೀಸಗಢ ಸರ್ಕಾರಗಳು ಕೂಡ ದೇಣಿಗೆ ನೀಡಿವೆ.