“ಪಕ್ಕದ ಮನೆ ಹುಡುಗೀನ ನೋಡಿ ಕಲಿ’, “ನಿನ್ನ ಅಕ್ಕನನ್ನು ನೋಡಿ ಕಲಿ’… ಹೀಗೆ ಮಕ್ಕಳನ್ನು, ಬೇರೆಯವರೊಂದಿಗೆ ಹೋಲಿಸೋದು ಸರ್ವೇ ಸಾಮಾನ್ಯ. (ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಅನ್ನೋದೂ ಅಷ್ಟೇ ಸಾಮಾನ್ಯ) ಇನ್ಮುಂದೆ ಅಮ್ಮಂದಿರು, “ಆ ಹಿಮಾ ದಾಸ್‌ನ ನೋಡಿ ಕಲಿ’ ಅಂತ ಹೇಳಲೂಬಹುದು. ಹಾಂ, ಕಲಿಯೋಕೆ ಹೇಳ್ತಿರೋದು ಹಿಮಾಳ ಹಾಗೆ ಓಡೋದನ್ನಲ್ಲ, ಆಕೆಯ ಹಾಗೆ ಅಡುಗೆ ಮಾಡೋದನ್ನ!
ಕಳೆದೊಂದು ತಿಂಗಳಲ್ಲೇ ಐದು ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದು ದಾಖಲೆ ಮಾಡಿದ ಹಿಮಾ ದಾಸ್‌ರ ಸಾಧನೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗ ಹಿಮಾ ದಾಸ್ ಬೇರೆಯದೇ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅದಕ್ಕೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹಿಮಾ, “ನಳಪಾಕದ’ ವಿಡಿಯೋವೇ ಕಾರಣ.
ಕ್ರೀಡಾಕೂಟದ ನಿಮಿತ್ತ ಯುರೋಪ್‌ನಲ್ಲಿರುವ ಹಿಮಾ, ತಾವು ಉಳಿದುಕೊಂಡಿದ್ದ ಹೋಟೆಲ್ ರೂಮ್‌ನಲ್ಲಿ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ತಾನಿವತ್ತು ಅಸ್ಸಾಮ್ ಶೈಲಿಯ ದಾಲ್ ತಯಾರಿಸುತ್ತಿರುವುದಾಗಿ ಹಿಮಾ ಹೇಳಿದ್ದರು. ಆ ವಿಡಿಯೋದಲ್ಲಿ ಹಿಮಾ ದಾಸ್- “ಇವತ್ತು ಭಾನುವಾರ. ನಂಗೆ ಪ್ರ್ಯಾಕ್ಟೀಸ್ ಇಲ್ಲ. ಹಾಗಾಗಿ, ಇಟ್ಸ್ ಟೈಮ್ ಟು ಎಂಜಾಯ್! ನಾನಿವತ್ತು ಅಸ್ಸಾಮಿ ಶೈಲಿಯಲ್ಲಿ ದಾಲ್ ತಯಾರಿಸೋಕೆ ಹೊರಟಿದ್ದೇನೆ. ಹಿಂದೊಮ್ಮೆ ರೂಮ್‌ನಲ್ಲಿ ದಾಲ್ ತಯಾರಿಸಿದ್ದಾಗ, ಅದರ ಪರಿಮಳಕ್ಕೆ ಮಾರು ಹೋದವರು, “ಏನು ಅಡುಗೆ ಮಾಡಿದ್ದೀಯಾ?’ ಅಂತ ಕೇಳಿಕೊಂಡು ರೂಮ್‌ಗೆ ಬಂದಿದ್ದರು. ಅವರಿಗೆಲ್ಲಾ ಅಸ್ಸಾಂ ದಾಲ್ ತಿನ್ನಿಸಿದ್ದೆ. ಎಲ್ಲರಿಗೂ ಬಹಳ ಇಷ್ಟವಾಗಿತ್ತು…’ ಎಂದು ಅಸ್ಸಾಮಿ ಭಾಷೆಯಲ್ಲಿ ಹೇಳಿದ್ದರು.
“ನಿನ್ನೆ, ನಾನು ಮತ್ತು ಸರಿತಾಬೆನ್ ಗಾಯಕವಾಡ, ಮಾರ್ಕೆಟ್‌ಗೆ ಹೋಗಿ, ಅಡುಗೆಗೆ ಬೇಕಾದ ಪಾತ್ರೆ ಹಾಗೂ ದಿನಸಿ ಸಾಮಗ್ರಿಗಳನ್ನು ಖರೀದಿಸಿ ತಂದಿದ್ದೇವೆ. ಮೊದಲೇ ನಮ್ಮ ಬಳಿ ಇಂಡಕ್ಷನ್ ಸ್ಟೌ ಇತ್ತು. ಹೀಗೆ ಬೇರೆ ದೇಶಕ್ಕೆ ಹೋದಾಗ, ನಮ್ಮ ದೇಶದ ಅಡುಗೆಯನ್ನು ಕೈಯಾರೆ ತಯಾರಿಸಿ, ಸವಿಯುವುದರ ಮಜಾವೇ ಬೇರೆ!’ ಎಂದು ಹಿಮಾದಾಸ್ ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡಿದೆ. ಅಡುಗೆ ಅನ್ನೋದು, ಬೇಯಿಸಿ-ಬಡಿಸುವ ಕೆಲಸವಷ್ಟೇ ಅಲ್ಲ, ಅದೊಂದು ಕಲೆ. ಬಿಡುವಿನ ವೇಳಿಯಲ್ಲಿ ಎಂಜಾಯ್ ಮಾಡುವ ಹವ್ಯಾಸ, ಒತ್ತಡ ಕಳೆದುಕೊಳ್ಳಲು ಮಾಡುವ ಧ್ಯಾನ ಎಂದೆಲ್ಲಾ ಹಿಮಾ ವಿಡಿಯೋವನ್ನು ಜನ ಹೊಗಳಿದ್ದಾರೆ.