Advertisement

ಕೊಳಕೆ ಶಾಲಾ ಕಟ್ಟಡಕ್ಕೆ ಗುಡ್ಡ ಕುಸಿತ: ನಾಲ್ಕು ತಿಂಗಳು ಕಳೆದರೂ ತೆರವಾಗದ ಮಣ್ಣು

07:36 PM Dec 11, 2019 | Team Udayavani |

ಬಂಟ್ವಾಳ: ಕಳೆದ ಮಳೆಗಾಲದಲ್ಲಿ ಸರಕಾರಿ ಶಾಲೆಯೊಂದರ ಗೋಡೆಯ ಬಳಿಗೆ ಗುಡ್ಡ ಕುಸಿದು ಕಟ್ಟಡ ಅಪಾಯದ ಸ್ಥಿತಿಗೆ ತಲುಪಿ ನಾಲ್ಕು ತಿಂಗಳು ಕಳೆದರೂ ಕುಸಿದಿರುವ ಮಣ್ಣು-ಕಲ್ಲುಗಳ ತೆರವು ಕಾರ್ಯ ಇನ್ನೂ ನಡೆದಿಲ್ಲ. ಇದು ಸಜೀಪನಡು ಗ್ರಾಮದ ಕೊಳಕೆ ಸರಕಾರಿ ಹಿ.ಪ್ರಾ. ಶಾಲೆಯ ಸ್ಥಿತಿ !

Advertisement

ಸಾಮಾನ್ಯವಾಗಿ ಸರಕಾರಿ ಶಾಲೆಗಳಿಗೆ ಪ್ರಾಕೃತಿಕ ವಿಕೋಪದಿಂದ ಹಾನಿಯಾದಾಗ ಅದರ ದುರಸ್ತಿ ಕಾರ್ಯ ಸರಕಾರಿ ನಿಯಮದಂತೆಯೇ ನಡೆಯ ಬೇಕಾಗುತ್ತದೆ. ಅಂದರೆ ಅದು ಕಟ್ಟಡಕ್ಕೆ ಹಾನಿ ಯಾಗಿ ಮರುನಿರ್ಮಾಣದ ಕಾರ್ಯ ನಿಧಾನವಾಗಿ ನಡೆದರೂ ತೊಂದರೆಯಿಲ್ಲ. ಕೊಳಕೆ ಶಾಲೆಯಲ್ಲಿ ಗುಡ್ಡ ಕುಸಿದು ಶಾಲೆಯ ಗೋಡೆ ಮೇಲೆ ನಿಂತಿದ್ದು, ಕಟ್ಟಡ ಅಪಾಯ ಸ್ಥಿತಿ ಯಲ್ಲಿದೆ. ಅದನ್ನು ಶೀಘ್ರ ತೆರವುಗೊಳಿಸದಿದ್ದರೆ ಅದು ಕಟ್ಟಡಕ್ಕೆ ಮತ್ತಷ್ಟು ಹಾನಿ ಮಾಡುವ ಸಾಧ್ಯತೆಯೇ ಹೆಚ್ಚು. ಕನಿಷ್ಠ ಮಣ್ಣು ತೆರವುಗೊಳಿಸಿ ಕಟ್ಟಡದ ಗುಣಮಟ್ಟ ಪರಿಶೀಲನೆ ನಡೆಸುವ ಕಾರ್ಯವನ್ನಾ ದರೂ ಮಾಡಬೇಕಿತ್ತು. ಆದರೆ ಅದೂ ನಡೆದಿಲ್ಲ.

ಈಗಾಗಲೇ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯ ಕಾರ್ಯ ನಡೆಸಿದ್ದಾರೆ. ಆದರೆ ಕುಸಿದಿರುವ ಮಣ್ಣು ಹಾಗೂ ಕಲ್ಲುಗಳನ್ನು ತೆರವುಗೊಳಿಸುವುದಕ್ಕೆ ತುರ್ತು ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸವೇ ಸರಿ. ಕಳೆದ ವಾರ ಸಂಬಂಧಪಟ್ಟ ಎಂಜಿನಿಯರ್‌, ಗುತ್ತಿಗೆದಾರರು ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

ತಾ.ಪಂ. ಸಭೆಯಲ್ಲಿ ಚರ್ಚೆ
ಗುಡ್ಡ ಕುಸಿದು ಶಾಲಾ ಕಟ್ಟಡಕ್ಕೆ ಹಾನಿಯಾಗಿರುವ ವಿಚಾರವು ಕಳೆದ ಆ. 29ರಂದು ನಡೆದ ಬಂಟ್ವಾಳ ತಾ.ಪಂ. ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿದ್ದು, ಈ ಕುರಿತು ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ಸೂಚನೆ ನೀಡಲು ಸಭೆ ನಿರ್ಣಯಿಸಿತ್ತು. ಪ್ರಸ್ತುತ ಸಭೆ ನಡೆದು ಮೂರು ತಿಂಗಳುಗಳೇ ಕಳೆದಿದೆ.

6, 7ಕ್ಕೆ ಒಂದೇ ತರಗತಿ
ಕೊಳಕೆ ಶಾಲೆ ತೀರಾ ಎತ್ತರವಾದ ಗುಡ್ಡ ಪ್ರದೇಶ ದಲ್ಲಿದ್ದು, ಪ್ರಸ್ತುತ 1ರಿಂದ 7ನೇ ತರಗತಿಯ ವರೆಗೆ ಸುಮಾರು 45 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ನಾಲ್ಕೇ ಮಂದಿ ಶಿಕ್ಷಕರಿರುವ ಕಾರಣದಿಂದ ಸಣ್ಣ ತರಗತಿಗಳ ವಿದ್ಯಾರ್ಥಿಗಳನ್ನು ಒಟ್ಟಿಗೆ ಕೂರಿಸಿ ಪಾಠ ಮಾಡಲಾಗುತ್ತಿದೆ.
ಪ್ರಸ್ತುತ ಗುಡ್ಡ ಕುಸಿದಿರುವ ಭಾಗದಲ್ಲಿ ಶೌಚಾಲಯ ಹಾಗೂ ಒಂದು ತರಗತಿ ಕೊಠಡಿ ಇದೆ. ಪರಿಶೀಲನೆ ನಡೆಸಿರುವ ಅಧಿಕಾರಿಗಳು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಆ ತರಗತಿ ಕೋಣೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸದಂತೆ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಅಲ್ಲಿ ಕಾರ್ಯಾಚರಿಸುತ್ತಿದ್ದ 7ನೇ ತರಗತಿಯನ್ನು ಮತ್ತೂಂದು ಕೊಠಡಿಗೆ ವರ್ಗಾಯಿಸಿ, ಪ್ರಸ್ತುತ 6 ಮತ್ತು 7ನೇ ತರಗತಿಯನ್ನು ಒಟ್ಟಿಗೇ ನಡೆಸಲಾಗುತ್ತಿದೆ.

Advertisement

 ಗಮನಕ್ಕೆ ತಂದಿದ್ದೇನೆ
ಮಣ್ಣು ತೆರವು ಕಾರ್ಯಕ್ಕೆ ಶಿಕ್ಷಣ ಇಲಾಖೆಯಲ್ಲಿ ಅನುದಾನ ಲಭ್ಯವಾಗದೇ ಇರುವುದರಿಂದ ಶಾಸಕರು – ತಾ.ಪಂ.ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಇತರ ಅನುದಾನ ಅಥವಾ ಗ್ರಾ.ಪಂ. ಮೂಲಕ ನರೇಗಾ ಅನುದಾನದಲ್ಲಿ
ತೆರವು ಕಾರ್ಯ ನಡೆಸಬೇಕಿದೆ.
 - ಜ್ಞಾನೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next