Advertisement
ಸುಬ್ರಹ್ಮಣ್ಯ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಾಲಸೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಹಾದು ಹೋದ ಕೆಲವು ಕಡೆಗಳಲ್ಲಿ ಗುಡ್ಡ ಜರಿಯಲಾರಂಬಿಸಿದೆ. ಭಾರೀ ಮಳೆಗೆ ಹಾಲೆಮಜಲು ಪಕ್ಕ ಹುಲುಕುಮೇರಿ ತಿರುವಿನಲ್ಲಿ ಮಂಗಳವಾರ ರಸ್ತೆ ಪಕ್ಕದ ಗುಡ್ಡ ರಸ್ತೆಗೆ ಕುಸಿದಿದೆ. ಇನ್ನಷ್ಟು ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ. ಈ ಗುಡ್ಡ ಜರಿದು ಬಿದ್ದಲ್ಲಿ ಈ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ತಗಿತಗೊಳ್ಳಲಿದೆ. ಇದರಿಂದ ಸಂಚಾರದಲ್ಲಿ ಭಾರಿ ಸಮಸ್ಯೆ ಸೃಷ್ಟಿಯಾಗಲಿದೆ. ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಲಿಸುವ ಪ್ರಮುಖ ರಸ್ತೆಯೂ ಇದೇ ಆಗಿದೆ.
ಕುಸಿತ ನಡೆದ ಸ್ಥಳದ ಇನ್ನೊಂದು ಭಾಗ ಖಾಸಗಿ ಕೃಷಿ ತೋಟವಿದೆ. ಕುಸಿತ ಕಾಣಿಸಿದ ರಸ್ತೆಯ ಇನ್ನೊಂದು ಬದಿ ಜಾಗ ಅರಣ್ಯ ಇಲಾಖೆಗೆ ಸೇರಿದೆ. ಇಲ್ಲಿ ಮಳೆ ಮುಂದುವರಿದಲ್ಲಿ ಭಾರೀ ಪ್ರಮಾಣದ ಗುಡ್ಡ ಜರಿದು ಬೀಳುವ ಸಾಧ್ಯತೆಗಳಿವೆ. ರಸ್ತೆ ಪೂತಿ ಮಣ್ಣು ತುಂಬಿಕೊಂಡು ಸಂಚಾರ ಬಂದ್ ಆಗಲಿದೆ. ಮಂಗಳವಾರ ಜರಿದ ಮಣ್ಣು ರಸ್ತೆಗೂ ವಿಸ್ತರಿಸಿ ಹರಡಿಕೊಂಡಿದೆ. ಈ ಜಾಗವೂ ಇಕ್ಕಟ್ಟಾಗಿದ್ದು ಸಾರಿಗೆ ಬಸ್ ಸಹಿತ ಸಾವಿರಾರು ವಾಹನಗಳು ತೆರಳುವ ವೇಳೆ ಆವಘಡಕ್ಕೂ ಕಾರಣವಾಗುವ ಭೀತಿ ಉಂಟಾಗಿದೆ. ಪ್ರಮುಖ ಸಂಪರ್ಕ ಕೊಂಡಿ
ಜಾಜಾಲಸೂರುರು – ಸುಬ್ರಹ್ಮಣ್ಯ ಮಾರ್ಗವು ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಇದು ಕಡಿತಗೊಂಡಲ್ಲಿ ಈ ಭಾಗದಿಂದ ಸುಳ್ಯ ಕೇಂದ್ರಕ್ಕೆ ಸಂಪರ್ಕ ಕಡಿತಗೊಳ್ಳುವುದು ಅಲ್ಲದೆ ಬೆಂಗಳೂರು, ಮೈಸೂರು, ಮಡಿಕೇರಿ, ಕೇರಳ ಭಾಗಕ್ಕೂ ಸಂಪರ್ಕ ನಷ್ಟವಾಗಲಿದೆ. ಮೂಲಸೌಕರ್ಯ ಈಡೇರಿಕೆಗೂ ತೊಂದರೆಯಾಗಲಿದೆ. ಶಾಲಾಮಕ್ಕಳು ಸಮಸ್ಯೆಗೆ ಒಳಗಾಗುವರು.
Related Articles
Advertisement
ಪ್ರಮುಖ ಸಂಪರ್ಕ ರಸ್ತೆಯ ಇನ್ನು ಹಲವು ಕಡೆಗಳಲ್ಲಿ ರಸ್ತೆ ಬದಿಯ ಗುಡ್ಡಗಳು ಕುಸಿಯುವ ಭೀತಿಯಲ್ಲಿದೆ. ಸುರಕ್ಷಿತವಲ್ಲದ ಈ ಪ್ರಮುಖ ರಸ್ತೆ ಈ ಮಳೆಗಾಲದ ಅವಧಿಯಲ್ಲಂತೂ ಕೈಕೊಡುವ ಎಲ್ಲ ಸಾಧ್ಯತೆಗಳು ಇವೆ. ಬದಲಿ ಮಾರ್ಗವಾಗಿ ಪ್ರಯಾಣಿಸಬೇಕಾದರೆ ಪಂಜ – ಬೆಳ್ಳಾರೆ ಮಾರ್ಗವಾಗಿ ತೆರಳಬೇಕು. ಸುತ್ತು ಬಳಸಿ ತೆರಳಬೇಕು. ಸ್ಥಳಿಯವಾಗಿ ಹಲವಾರು ಜನವಸತಿ ಗ್ರಾಮಗಳ ಜನತೆಗೆ ಭಾರೀ ಅನಾನುಕೂಲವಾಗಲಿದೆ.
ಕಳೆದ ವರ್ಷ ಕಲ್ಲಾಜೆ ಬಳಿ ಕುಸಿತಕಳೆದ ವರ್ಷ ಇದೇ ಮಾರ್ಗದ ಕಲ್ಲಾಜೆ ಬಳಿ ಭಾರಿ ಭೂಕುಸಿತ ಉಂಟಾಗಿತ್ತು. ರಸ್ತೆ ವಿಸ್ತರಣೆಗೂ ಅಡ್ಡಿಯಾಗಿತ್ತು. ಹೀಗಾಗಿ ಈ ಮಾರ್ಗದಲ್ಲಿ ಸಂಚಾರ 15ಕ್ಕೂ ಹೆಚ್ಚು ದಿನಗಳ ಕಾಲ ಸ್ಥಗಿತಗೊಂಡಿತ್ತು. ಈ ವೇಳೆ ಸುಬ್ರಹ್ಮಣ್ಯ ಭಾಗದಿಂದ ಸುಳ್ಯ ಕಡೆ ತೆರಳುವ ವಾಹನಗಳು ಮಲೆಯಾಳದಲ್ಲಿ ಕವಲೊಡೆದು ಹರಿಹರ ಮಾರ್ಗವಾಗಿ ಸಂಚಾರ ಬೆಳೆಸಿದ್ದವು, ಮಲೆಯಾಳ – ಹರಿಹರ ಮಾರ್ಗವೂ ಹದಗೆಟ್ಟಿದೆ. ಈ ಮಾರ್ಗದಲ್ಲಿ ರಸ್ತೆ ಕಾಮಗಾರಿಗೆಂದು ಅಲ್ಲಲ್ಲಿ ಮಣ್ಣು ಹಾಕಿ ರಸ್ತೆ ತಡೆ ನಡೆಸಿದ್ದು, ಅದನ್ನು ಇನ್ನೂ ತೆರವುಗೊಳಿಸಿಲ್ಲ. ಕಡಮಕಲ್ಲು ರಸ್ತೆ ಅಭಿವೃದ್ಧಿ ಅನಿವಾರ್ಯ
ಪರ್ಯಾಯ ರಸ್ತೆಯಾಗಿ ಮಡಿಕೇರಿ ಭಾಗದಿಂದ ಕುಕ್ಕೆ ಸುಬ್ರಹ್ಮಣ್ಯ ಭಾಗಕ್ಕೆ ಇರುವ ಹತ್ತಿರದ ಗಾಳಿಬೀಡು – ಕಡಮಕಲ್ಲು – ಸುಬ್ರಹ್ಮಣ್ಯ ಕಚ್ಚಾ ರಸ್ತೆ ಅಭಿವೃದ್ಧಿ ಆದಲ್ಲಿ ಜಾಲಸೂರು – ಸುಬ್ರಹ್ಮಣ್ಯ ಮಾರ್ಗದ ಒತ್ತಡ ಮತ್ತು ಅಂತರ ಕಡಿಮೆಗೊಳಿಸಬಹುದು. ಗಾಳಿಬೀಡು – ಕಡಮಕಲ್ಲು ಕಚ್ಚಾ ರಸ್ತೆ ಅಭಿವೃದ್ಧಿಗೆ ಇರುವ ಕಾನೂನು ತೊಡಕಿದ್ದು, ಅದು ಸದ್ಯ ನಿವಾರಣೆಯಾಗದು. ಗಮನಕ್ಕೆ ತಂದಿದ್ದೇವೆ
ಸುಬ್ರಹ್ಮಣ್ಯ-ಜಾಲಸೂರು ಹೆದ್ದಾರಿ ನಡುವೆ ಹಾಲೆಮಜಲು ಬಳಿ ಭೂಕುಸಿತ ನಡೆದ ಕುರಿತು ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದಿದ್ದೇವೆ. ಇನ್ನಷ್ಟು ಜರಿಯುವ ಭೀತಿ ಇರುವುದರಿಂದ ಮತ್ತು ಈ ರಸ್ತೆ ಪ್ರಮುಖ ರಸ್ತೆ ಆಗಿರುವುದರಿಂದ ತ್ವರಿತ ಸ್ಪಂದನೆ ಅಗತ್ಯವಿದೆ.
– ಅಚ್ಯುತ ಗುತ್ತಿಗಾರು, ಅಧ್ಯಕ್ಷ ಗ್ರಾ.ಪಂ. ಗುತ್ತಿಗಾರು