ಹಾಸನ: ಭೂ ಕುಸಿತದ ಪರಿಣಾಮ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ನಲ್ಲಿ ಗುರುವಾರ ಸಂಜೆಯಿಂದಲೇ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಸನ ಜಿಲ್ಲಾಧಿಕಾರಿ
ಸತ್ಯಭಾಮಾ ಸಿ. ಆದೇಶ ಹೊರಡಿಸಿದ್ದಾರೆ.
ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿದಿದ್ದು ಸಕಲೇಶಪುರ, ಹಾಸನ, ಬೆಂಗಳೂರು ತೆರಳುವ ವಾಹನದವರು ಬದಲಿ ರಸ್ತೆಯಲ್ಲಿ ಸಂಚಾರ ನಡೆಸುವಂತೆ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸರು ಆ ದಾರಿಯಾಗಿ ಬರುವ ವಾಹನ ಸವಾರರಿಗೆ ಗುರುವಾರ ಬೆಳಗ್ಗಿನಿಂದಲೇ ಮಾಹಿತಿ ನೀಡಿ ಬದಲಿ ರಸ್ತೆಯನ್ನು ಬಳಸುವಂತೆ ತಿಳಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನ ದೊಡ್ಡತಪ್ಪಲು ಎಂಬಲ್ಲಿ ಗುರುವಾರ (ಜು.18) ನಸುಕಿನ ಜಾವ 2.30ರ ಸಮಯಕ್ಕೆ ಭೂ ಕುಸಿತ ಉಂಟಾಗಿ ಓಮಿನಿಯೊಂದು ಜಖಂಗೊಂಡಿತ್ತು. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ: Hill Collapse ಭೀತಿ: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿದಿದ್ದು ಯಾವುದೇ ರೀತಿಯಲ್ಲಿ ಅವಘಡ ನಡೆಯದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.
ಮೈಸೂರು, ಬೆಂಗಳೂರಿಗೆ ಸಂಚರಿಸುವ ವಾಹನಗಳು ಬದಲಿ ರಸ್ತೆಯಾದ ಚಾರ್ಮಾಡಿ ಘಾಟ್ – ಕೊಟ್ಟಿಗೆಹಾರ ಮಾರ್ಗವನ್ನು ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.