Advertisement

ತೆಂಕಿಲ ಗುಡ್ಡದಲ್ಲಿ ಬಿರುಕು: ಆತಂಕದಲ್ಲಿ ಜನತೆ

10:29 PM Aug 12, 2019 | mahesh |

ಪುತ್ತೂರು: ಮಡಿಕೇರಿ, ಚಾರ್ಮಾಡಿ ಭಾಗಗಳಲ್ಲಿ ಗುಡ್ಡ ಕುಸಿತದ ಘಟನೆಗಳು ನಡೆಯುತ್ತಿದ್ದು, ಪುತ್ತೂರಿನಲ್ಲೂ ಅಂತಹದ್ದೇ ಅಪಾಯ ಕಾಣಿಸಿಕೊಂಡಿದೆ. ತೆಂಕಿಲ ದರ್ಖಾಸು ಎಂಬಲ್ಲಿ 400 ಮೀ. ಎತ್ತರದ ಗುಡ್ಡದ ನಡುವೆ 100 ಮೀ. ಉದ್ದಕ್ಕೆ ಆಳವಾಗಿರುವ ಬಿರುಕು ಕಾಣಿಸಿಕೊಂಡಿದೆ.

Advertisement

ತೆಂಕಿಲ ದರ್ಖಾಸುನಲ್ಲಿರುವ ಗೇರು ಅಭಿವೃದ್ಧಿ ನಿಗಮದ ಗೇರು ತೋಟವಿರುವ ಗುಡ್ಡದಲ್ಲಿ ಬಿರುಕು ಕಾಣಿಸಿದ್ದು, ಕುಟುಂಬಗಳಿಗೆ ಆತಂಕ ಎದುರಾಗಿದೆ. ಸೋಮವಾರ ಮಧ್ಯಾಹ್ನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಗುಡ್ಡದಲ್ಲಿ ಲಘು ಭೂ ಕಂಪನದ ಸಾಧ್ಯತೆ ಹೆಚ್ಚಾಗಿರುವ ಸೂಚನೆ ನೀಡಿದ್ದಾರೆ.

ಗುಡ್ಡದಲ್ಲಿ ಬಿರುಕು ಕಾಣಿಸಿದ್ದು ರವಿವಾರ ಸ್ಥಳೀಯರ ಗಮನಕ್ಕೆ ಬಂದಿತ್ತು. ಗುಡ್ಡದ ಮಧ್ಯಭಾಗದಲ್ಲಿ 100 ಮೀ. ಉದ್ದಕ್ಕೆ ಭೂಮಿ ಬಿರುಕು ಬಿಟ್ಟಿದೆ. ಗುಡ್ಡದ ತುದಿಯಲ್ಲೂ ಅಡ್ಡ ಮತ್ತು ನೇರವಾಗಿ ಬಿರುಕು ಮೂಡಿದೆ. ಸ್ವಲ್ಪ ಕೆಳ ಭಾಗದಲ್ಲಿರುವ ಮೊಗೇರ್ಕಳ ಗರಡಿಯ ಬಳಿ ನೆಲದಿಂದ ಮಣ್ಣು ಮಿಶ್ರಿತ ನೀರು ಉಕ್ಕಿ ಹರಿಯುತ್ತಿದೆ. ಗುಡ್ಡದ ಈಗಿನ ಸ್ಥಿತಿ ಮೊಣ್ಣಂಗೇರಿಯಲ್ಲಿ ನಡೆದ ದುರಂತದ ನೆನಪು ಮಾಡಿಸಿ, ಜನರಲ್ಲಿ ಭೀತಿ ಸೃಷ್ಟಿಸಿದೆ.

ಮನೆಗೆ ಧರೆ ಬಿದ್ದ ಬಳಿಕ
ಈ ಭಾಗದಲ್ಲಿ ರವಿ ಮತ್ತು ಹರೀಶ್‌ ಅವರಿಗೆ ಸೇರಿದ ನಿರ್ಮಾಣ ಹಂತದಲ್ಲಿರುವ ಮನೆಯ ಮೇಲೆ ಶನಿವಾರ ರಾತ್ರಿ ಗುಡ್ಡ ಜರಿದು ಬಿದ್ದು, ಅಪಾರ ನಷ್ಟ ಸಂಭವಿಸಿತ್ತು. ರವಿವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಶಾಸಕ ಸಂಜೀವ ಮಠಂದೂರು, ಭೂವಿಜ್ಞಾನ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಅಪಾಯವಿದೆ: ಭೂವಿಜ್ಞಾನಿಗಳ ವರದಿ
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಪದ್ಮಶ್ರೀ, ಅಂತರ್ಜಲ ಪರಿಶೋಧಕಿ ವಸುಧಾ ಅವರು ಸೋಮವಾರ ಮಧ್ಯಾಹ್ನ ತೆಂಕಿಲ ಗುಡ್ಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡ್ಡದ ರಚನಾ ವಲಯ ಅಪಾಯಕಾರಿಯಾಗಿದೆ. ಇಲ್ಲಿನ ತೇವಾಂಶ ರಹಿತ ಪದರವು ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಳ್ಳುತ್ತಿದೆ. ಒಳಗೆ ಶೇಖರಣೆಗೊಂಡ ನೀರು ಹೊರಹೋಗುವ ಪ್ರಮಾಣ ಕಡಿಮೆ ಇರುವುದರಿಂದ ಒತ್ತಡ ನಿರ್ಮಾಣವಾಗಿ ಬಿರುಕು ಬಿಟ್ಟಿದೆ. ಇದು ಲಘು ಭೂಕಂಪನದ ಸಾಧ್ಯತೆಯೂ ಇದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

Advertisement

ಪಕ್ಕದಲ್ಲೇ ಲೇಔಟ್‌ ಮಾಡುವವರು ಸ್ಫೋಟಕಗಳನ್ನು ಬಳಸಿ ಕಲ್ಲುಗಳನ್ನು ಒಡೆಯುತ್ತಿರುವುದರಿಂದ ಬಿರುಕು ಬಿಟ್ಟಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳಿದರು. ಆದರೆ ಈ ಸಾಧ್ಯತೆಯ ಪ್ರಮಾಣ ಕಡಿಮೆ ಇದೆ. ಬೆಟ್ಟದ ಮಣ್ಣಿನ ರಚನೆಯ ಅಪಾಯವೇ ಹೆಚ್ಚಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ.

ಆತಂಕದಲ್ಲಿ ಬದುಕು
ಗುಡ್ಡದಲ್ಲಿ ಹಾಗೂ ತಪ್ಪಲಿನಲ್ಲಿ ಹಲವು ಮನೆಗಳಿವೆ. ಬಿರುಕು ಬಿಟ್ಟ ವ್ಯಾಪ್ತಿಯಲ್ಲಿಯೇ 13 ಮನೆಗಳಿವೆ. ಸೇಸಪ್ಪ ಗೌಡ, ಗಿರಿಜಾ, ಕಮಲಾ, ಮಹಾಲಿಂಗ, ಗಂಗಪ್ಪ, ಗುರುವ, ಆನಂದ, ಗಂಗಾಧರ, ಬೇಬಿ, ಸುಶೀಲಾ, ಸತೀಶ್‌, ಕೊರಗಪ್ಪ ಮೊದಲಾದವರ ಮನೆಗಳು ಅಪಾಯದ ವಲಯದಲ್ಲಿವೆ. ಅಪಾಯದ ಸೂಚನೆಯಿಂದಾಗಿ ಇವರೆಲ್ಲ ಆತಂಕದಲ್ಲೇ ಬದುಕುತ್ತಿದ್ದಾರೆ.

4 ಕುಟುಂಬ ಸ್ಥಳಾಂತರ
ಸಂಜೆ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ಡಾ| ಎಚ್‌.ಕೆ. ಕೃಷ್ಣಮೂರ್ತಿ, ಈ ಪ್ರದೇಶದ 11 ಮನೆಗಳಿಗೆ ತೆರಳಿ, ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದಾರೆ. ಅವರಿಗೆ ನಗರ ಸಮುದಾಯ ಭವನದಲ್ಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. 4 ಕುಟುಂಬಗಳು ಸ್ಥಳಾಂತರಗೊಂಡಿವೆ. ಕೆಲವರು ಸಂಬಂಧಿಕರ ಮನೆಗೆ ತೆರಳುವುದಾಗಿ ತಿಳಿಸಿದ್ದು, ವಾಹನ ವ್ಯವಸ್ಥೆ ಮಾಡಿಕೊಡಲಾಗಿದೆ.

ಶಾಶ್ವತ ಪರಿಹಾರವಲ್ಲ
ಬಿರುಕು ಆಳಕ್ಕೆ ಇದೆ. ಲಘು ಭೂಕಂಪನ ಅಥವಾ ಮಣ್ಣು ಕುಸಿತದ ಸಾಧ್ಯತೆ ಹಿನ್ನೆಲೆ ಅಪಾಯ ಸ್ಥಿತಿ ಇದೆ. ಗುಡ್ಡದಲ್ಲಿ ಅಲ್ಲಲ್ಲಿ ತೂತು ಕೊರೆದು ಶೇಖರಣೆಗೊಂಡ ನೀರು ಹೊರಹೋಗುವಂತೆ ಮಾಡಿ ಒತ್ತಡ ಕಡಿಮೆ ಮಾಡುವುದರಿಂದ ತಾತ್ಕಾಲಿಕವಾಗಿ ಅಪಾಯ ತಡೆಯಬಹುದಾಗಿದೆ. ಇದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ..
– ಪದ್ಮಶ್ರೀ, ಭೂವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next