Advertisement

Rain: ಭಾರೀ ಮಳೆಯಿಂದ ಶಿರೂರಿನಲ್ಲಿ ಗುಡ್ಡ ಕುಸಿತ; 9 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

11:51 AM Jul 16, 2024 | Team Udayavani |

ಅಂಕೋಲಾ: ಉತ್ತರ ಕನ್ನಡದಲ್ಲಿ ಭಾರಿ ಮಳೆಯ ಪರಿಣಾಮ ಅಂಕೋಲಾ ತಾಲೂಕಿನ ಶಿರೂರು ಬಳಿಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 9 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Advertisement

ಮಂಗಳವಾರ(ಜು.16ರಂದು) ಭೀಕರ ಮಳೆಯಿಂದ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಮಣ್ಣಿನಡಿಯಲ್ಲಿ ಒಂದೇ ಕುಟುಂಬದ ಐವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹೆದ್ದಾರಿ ಪಕ್ಕದಲ್ಲಿದ್ದ ಮನೆಯಲ್ಲಿನ ಕುಟುಂಬದ ಸದಸ್ಯರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಎರಡು ಕುಟುಂಬದ ಒಟ್ಟು ಒಂಬತ್ತು ಮಂದಿ ಮಣ್ಣಿನಡಿ ಸಿಲುಕೊಂಡಿದ್ದಾರೆ ಎನ್ನಲಾಗುತ್ತಿದೆ. ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ್ (11), ಅವಾಂತಿಕಾ (6), ಜಗನ್ನಾಥ(55 ) ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಗುಡ್ಡ ಕುಸಿತಿದಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಾರವಾರ ಗೋವಾ ಅಂಕೋಲಾದಿಂದ ಕೇರಳ, ಮಂಗಳೂರು, ಕುಮಟಾ ಮತ್ತಿತರ ಭಾಗಗಳಿಗೆ ತೆರಳುವವರು ಹೆದ್ದಾರಿಯಲ್ಲಿ ಕಾಲ ಕಳೆಯುವಂತಾಗಿದೆ.

Advertisement

ಚತುಷ್ಪಥ ಹೆದ್ದಾರಿಗಾಗಿ ಗುಡ್ಡವನ್ನ ಕೊರೆಯಲಾಗಿತ್ತು ಈ ಗುಡ್ಡವು ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿರುವುದರಿಂದ ಹೆದ್ದಾರಿಯ ತುಂಬಾ ಮಣ್ಣು ಕಲ್ಲುಗಳು ತುಂಬಿ ಸಂಚರಿಸಲು ಆಗದ ಹಾಗೆ ಮಾರ್ಪಟ್ಟಿದೆ.

ಹೆದ್ದಾರಿಯಲ್ಲಿ ನಿಂತಿರುವ ಅನೇಕ ವಾಹನಗಳಿಗೂ ಹಾನಿ ಉಂಟಾಗಿದ್ದು ಅಲ್ಲಿ ನಿಂತಿರುವ ಒಂದು ಗ್ಯಾಸ್ ಟ್ಯಾಂಕರ್ ಪಕ್ಕದಲ್ಲಿರುವ ಗಂಗಾವಳಿ ನದಿಗೆ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಅದರಲ್ಲಿದ್ದ ಚಾಲಕ ಕ್ಲೀನರ್ ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.

ಈಗಾಗಲೇ ಅಂಕೋಲಾ ತಾಲೂಕು ಆಡಳಿತ ಅಗ್ನಿಶಾಮಕದಳ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು ಮಣ್ಣಿನ ಅಡಿಯಲ್ಲಿ ಎಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ರಸ್ತೆಯ ಮೇಲೆ ಬಿದ್ದಿರುವ ಮಣ್ಣನ್ನು ತೆರವು ಮಾಡಲು 24 ಗಂಟೆಗೂ ಅಧಿಕ ಕಾಲ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next