Advertisement

Kaup: ಎಲ್ಲೂರು ಬಳಿ ಗುಡ್ಡ ಕುಸಿತ ಭೀತಿ

03:50 PM Aug 13, 2024 | Team Udayavani |

ಕಾಪು: ಉಚ್ಚಿಲ – ಎಲ್ಲೂರು – ಮುದರಂಗಡಿ ರಸ್ತೆಯ ಎಲ್ಲೂರು ಬಳಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಕಳೆದ ಕೆಲವು ದಿನಗಳ ಕಾಲ ಸುರಿದ ಭಾರೀ ಮಳೆಯಿಂದಾಗಿ ಎಲ್ಲೂರು ವಿಶ್ವೇಶ್ವರ ದೇವಸ್ಥಾನದ ಬಳಿಯಿಂದ ಸಾಗುವ ಲೋಕೋಪಯೋಗಿ ರಸ್ತೆಯ ಪಕ್ಕದಲ್ಲಿ ಸೇತುವೆ ಸಮೀಪದ ಎತ್ತರ ಪ್ರದೇಶದ ಗುಡ್ಡವು ರಸ್ತೆಯಂಚಿನವರೆಗೆ ಕುಸಿದಿದೆ.

Advertisement

ಗುಡ್ಡ ಕುಸಿತದ ಕಾರಣ ಗುಡ್ಡದ ಮಣ್ಣು ರಸ್ತೆಯ ಅಂಚಿನವರೆಗೂ ಬಿದ್ದಿದ್ದು ಮಳೆ ಕಡಿಮೆಯಾದ ಪರಿಣಾಮ ಗುಡ ಕುಸಿತಕ್ಕೆ ಸದ್ಯಕ್ಕೆ ಬ್ರೇಕ್‌ ಸಿಕ್ಕಿದೆ. ಇನ್ನಷ್ಟು ಜರಿದು ಬಿದ್ದಲ್ಲಿ ಮಣ್ಣಿನೊಂದಿಗೆ ಗುಡ್ಡದ ಮೇಲಿರುವ ಮರಗಳು ಕೂಡ ಕುಸಿದು ಬೀಳುವ ಅಪಾಯವಿದ್ದು ಹೀಗೆ ಆದಲ್ಲಿ ರಾ.ಹೆ. 66ರ ಉಚ್ಚಿಲ – ಪಣಿಯೂರು – ಎಲ್ಲೂರು – ಮುದರಂಗಡಿ ರಸ್ತೆಯಲ್ಲಿನ ಸಂಚಾರಕ್ಕೆ ತೊಡಕಾಗುವ ಸಾಧ್ಯತೆಗಳಿವೆ. ಗುಡ್ಡ ಕುಸಿತದ ಪ್ರದೇಶಕ್ಕೆ ತಾಗಿಕೊಂಡೇ ವಿದ್ಯುತ್‌ ಕಂಬಗಳೂ ಇದ್ದು ವಿದ್ಯುತ್‌ ಕಂಬ ಮತ್ತು ವಿದ್ಯುತ್‌ ಲೈನ್‌ಗೂ ಅಪಾಯವುಂಟಾಗುವ ಸಾಧ್ಯತೆಗಳಿವೆ.

ಮತ್ತೆ ಮಳೆ ಬಂದಲ್ಲಿ ಇನ್ನಷ್ಟು ಜರಿತದ ಭೀತಿ ಎದುರಾಗಿದ್ದು ಪೂರ್ಣ ಕುಸಿದು, ಅಪಾಯ ಎದುರಾಗುವ ಮೊದಲು ಇದಕ್ಕೊಂದು ತಾತ್ಕಾಲಿಕ ಪರಿಹಾರ ನೀಡುವುದು ಅತೀ ಅಗತ್ಯವಾಗಿದೆ.

ಅಪಾಯದ ಭೀತಿಯ ಬಗ್ಗೆ ಸ್ಥಳೀಯರು ಮತ್ತು ಪಣಿಯೂರು-ಎಲ್ಲೂರು ನಡುವಿನ ರಸ್ತೆ ಸಂಚಾರಿಗಳು ಈಗಾಗಲೇ ಎಲ್ಲೂರು ಗ್ರಾ.ಪಂ. ಗಮನಕ್ಕೆ ತಂದಿದ್ದು ಗ್ರಾ.ಪಂ. ಕೂಡಲೇ ಎಚ್ಚೆತ್ತುಕೊಂಡು ತುರ್ತು ಕೆಲಸ ಮಾಡಬೇಕಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಪರಿಶೀಲನೆ; ಮರಗಳು, ಮಣ್ಣು ತೆರವಿಗೆ ಪ್ರಯತ್ನ

Advertisement

ಎಲ್ಲೂರು ದೇವಸ್ಥಾನದ ಬಳಿಯ ರಸ್ತೆಯ ಗುಡ್ಡ ಕುಸಿತದ ವಿಚಾರವನ್ನು ಈಗಾಗಲೇ ಗಮನಿಸಿದ್ದು ಪರಿಶೀಲಿಸಲಾಗಿದೆ. ಇದು ಖಾಸಗಿಯವರಿಗೆ ಸೇರಿದ ಜಾಗವಾಗಿದ್ದು, ಗುಡ್ಡ ತೆರವುಗೊಳಿಸುವುದು ಅಸಾಧ್ಯದ ಮಾತಾಗಿದೆ. ಗುಡ್ಡದ ಬದಿಯಲ್ಲಿರುವ ಅಪಾಯಕಾರಿ ಮರಗಳ ತೆರವಿಗಾಗಿ ಮರ ತೆರವು ಕಾರ್ಮಿಕರನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಮಳೆಯ ಸಂದರ್ಭದಲ್ಲಿ ಮರ ತೆರವು ಕಾರ್ಯಾಚರಣೆ ಅಪಾಯಕಾರಿಯಾಗಿ ಪರಿಣಮಿಸಲಿದ್ದು ಮಳೆ ಸಂಪೂರ್ಣವಾಗಿ ನಿಂತ ಬಳಿಕ ಕಾರ್ಮಿಕರನ್ನು ಗೊತ್ತುಪಡಿಸಿಕೊಂಡು ಅಪಾಯಕಾರಿಯಾಗಿರುವ ಮರಗಳನ್ನು ತೆರವುಗೊಳಿಸಿ, ಕುಸಿದ ಮಣ್ಣನ್ನು ತೆರವುಗೊಳಿಸಲಾಗುವುದು.
-ರವಿರಾಜ್‌ ರಾವ್‌ ಎಲ್ಲೂರು, ಅಧ್ಯಕ್ಷರು, ಎಲ್ಲೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next