ನರಗುಂದ: ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ರೈತ ಸೇನಾ ಕರ್ನಾಟಕ ಹಾಗೂ ಮಲಪ್ರಭೆ ಮಹದಾಯಿ ಹೋರಾಟ ಸಮನ್ವಯ ಸಮಿತಿ ಆಶ್ರಯದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 4 ಜಿಲ್ಲೆ 11 ತಾಲೂಕುಗಳ ರೈತ ಮುಖಂಡರು ಮತ್ತು ಎಲ್ಲ ಮಹದಾಯಿ ಹೋರಾಟಗಾರರ ಬೃಹತ್ ಪಾದಯಾತ್ರೆ ಜರುಗಿತು.
ಸೋಮವಾರ ಪಟ್ಟಣದ ಪುರಸಭೆ ಆವರಣದಲ್ಲಿರುವ ಬಾಬಾಸಾಹೇಬ ಭಾವೆ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿದರು. ಬಳಿಕ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಮಹದಾಯಿ ಹೋರಾಟಗಾರರು ಬೃಹತ್ ಮೆರವಣಿಗೆ ಮೂಲಕ ಮಹದಾಯಿ ಹೋರಾಟ ವೇದಿಕೆಗೆ ಆಗಮಿಸಿದರು.
ವೀರೇಶ ಸೊಬರದಮಠ ಸ್ವಾಮೀಜಿ ಮಾತನಾಡಿ, 20 ದಿನಗಳೊಳಗೆ ಮುಖ್ಯಮಂತ್ರಿಗಳು ಮಹದಾಯಿ ಹೋರಾಟಗಾರರನ್ನು ಕರೆಸಿ ಯೋಜನೆ ಬಗ್ಗೆ ಸಾಧಕ-ಬಾಧಕಗಳನ್ನು ಚರ್ಚಿಸಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಇದು ಆಗದಿದ್ದರೆ ಬೆಂಗಳೂರು ಚಲೋ ನಡೆಸಲಾಗುವುದು ಎಂದು ಹೇಳಿದರು.
ವಿವಿಧ ಬೇಡಿಕೆ: ಮಹದಾಯಿ ಯೋಜನೆ ಕಾಮಗಾರಿಗೆ ಸರಕಾರ ಶೀಘ್ರ ಚಾಲನೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಮತ್ತು ಶಾಶ್ವತ ಖರೀದಿ ಕೇಂದ್ರ ಸ್ಥಾಪನೆ, 2020 ಮತ್ತು 2021ನೇ ಸಾಲಿನ ಮುಂಗಾರು ಬೆಳೆ ಹಾನಿ ಪರಿಹಾರ ಹಾಗೂ ಮೂರ್‍ನಾಲ್ಕು ವರ್ಷಗಳ ಬೆಳೆ ಪರಿಹಾರ, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಜಮೀನಿಗೆ ಹಕ್ಕುಪತ್ರ ಪೂರೈಕೆ, ನೀರಾವರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಸಿಬಿಐ ತನಿಖೆ, ಸಿಂಗಟಾಲೂರಿನ ಏತ ನೀರಾವರಿ ಯೋಜನೆ ಮೂಲಕ ಗದಗ ಜಿಲ್ಲೆಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಒತ್ತಾಯಿಸಿದರು.
ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ, ಪರಶುರಾಮ ಜಂಬಗಿ, ಹನಮಂತ ಸರನಾಯ್ಕರ, ರಾಘವೇಂದ್ರ ಗುಜಮಾಗಡಿ, ಮಲ್ಲಣ್ಣ ಆಲೇಕಾರ, ಶ್ರೀಶೈಲ ಮೇಟಿ, ಸುಭಾಷ ಗಿರೆಣ್ಣವರ ಮೊದಲಾದವರಿದ್ದರು.