ಹೊನ್ನಾಳಿ: ಪಂಚ ಪೀಠಗಳಲ್ಲೊಂದಾದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠಕ್ಕೆ ಇಲ್ಲಿನ ಹಿರೇಕಲ್ಮಠದ ಡಾ| ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಗುರುವಾರ ಬೆಳಗ್ಗೆ ಪಾದಯಾತ್ರೆ ಆರಂಭಿಸಿದರು.
ಪಾದಯಾತ್ರೆಗೆ ಮುನ್ನ ಮಾತನಾಡಿದ ಶ್ರೀಗಳು, ಮನುಕುಲದ ಒಳಿತಿಗಾಗಿ ಹಾಗೂ ಪರಿಸರ ಸಂರಕ್ಷಣೆಗಾಗಿ ಜನ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಳೆ ಕಡಿಮೆಯಾಗಿ ರೈತರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಕಾರಣ ಭೂಮಿ ಮೇಲೆ ಮಾನವನ ಅತಿಯಾದ ಚಟುವಟಿಕೆ ಎಂದು ಹೇಳಿದರು. ಪಾದಯಾತ್ರೆಯುದ್ದಕ್ಕೂ ಪರಿಸರ ರಕ್ಷಣೆ, ಧರ್ಮದಿಂದ ಬಾಳುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಪಾದಯಾತ್ರೆಯಲ್ಲಿ ತಂಗುವ ಸ್ಥಳದಲ್ಲಿ ಸಸಿ ವಿತರಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಸಸಿ ಪಡೆದ ಪ್ರತಿಯೊಬ್ಬರು ನೀರು ಹಾಕಿ ಕನಿಷ್ಠ ಮೂರು ವರ್ಷಗಳ ಕಾಲ ಪೋಷಣೆ ಮಾಡಲು ಸೂಚಿಸಲಾಗುವುದು ಎಂದು ಹೇಳಿದರು. ನನಗೆ ಮೂರು ವರ್ಷ ಕೇವಲ ನೀರುಣಿಸಿ ಸಾಕು, ನಿಮಗೆ ನೂರು ವರ್ಷ ಶುದ್ಧ ಗಾಳಿ, ನೆರಳು ಕೊಟ್ಟು ಸಲಹುತ್ತೇನೆ ಎಂದು ಸಸ್ಯ ಮಾನವನಿಗೆ ಹೇಳುತ್ತದೆ. ಆದರೆ ದುರಾಸೆಯಿಂದ ಮನುಷ್ಯ ಮಾತ್ರ ಕಾಡನ್ನು ನಿರಂತರವಾಗಿ ಕಡಿಯುತ್ತಾ ಸಾಗಿದ್ದಾನೆ. ಇದರಿಂದ ಮನುಕುಲದ ಅಳಿವು ಪ್ರಾರಂಭವಾಗಿದೆ ಎಂದು ಹೇಳಿದರು.
ಹಿರೇಕಲ್ಮಠದಿಂದ ಸುಂಕದಕಟ್ಟೆ, ಒಡೆಯಹತ್ತೂರು, ಕುಂಕುವ, ಮುಸ್ಸೇನಾಳು ಮೂಲಕ ಶಿವಮೊಗ್ಗ ನಗರ ತಲುಪಿ ಗುರುವಾರ ರಾತ್ರಿ ಅಲ್ಲಿ ತಂಗುವರು. ಶಿವಮೊಗ್ಗದಿಂದ ಲಕ್ಕೊಳ್ಳಿ, ಉಂಬ್ಳೆಬೈಲು ತಲುಪಿ ಅಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡುವರು. ಶನಿವಾರ ಬೆಳಗ್ಗೆ ಪಾದಯಾತ್ರೆ ಪ್ರಾರಂಭಿಸಿ ಕೊಪ್ಪ ಪಟ್ಟಣದ ಮೂಲಕ ಬಾಳೆಹೊನ್ನೂರು ತಲುಪುವರು.
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳ ನೇತೃತ್ವದಲ್ಲಿ ಶನಿವಾರ ರಾತ್ರಿ ನಡೆಯುವ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗಹಿಸುವರು ಎಂದು ಶ್ರೀಮಠದ ವ್ಯವಸ್ಥಾಪಕ ಚನ್ನಬಸಯ್ಯ ಹೇಳಿದರು.