Advertisement

ದಿಢೀರ್‌ ಏರಿಕೆ ಕಂಡ ಎಲೆಕೋಸು ಬೆಲೆ

12:30 PM Dec 10, 2021 | Team Udayavani |

ಬಂಗಾರಪೇಟೆ: ಇತ್ತೀಚೆಗೆ ಸುರಿದ ಮಳೆಯಿಂದ ತರಕಾರಿ ಸೇರಿ ಎಲ್ಲಾ ತರಹದ ಬೆಳೆ ನಾಶವಾಗಿದ್ದು, ಹೊರ ರಾಜ್ಯಗಳಿಂದ ಬೇಡಿಕೆ ಹೆಚ್ಚಾದ ಕಾರಣ ಎಲೆಕೋಸು ಬೆಳೆಗೆ ಬಂಗಾರದ ಬೆಲೆ ಬಂದು, ಬೆಳೆಗಾರರ ಮೊಗದಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ. ಅಲ್ಲದೆ, ಜೇಬು ತುಂಬ ಕಾಸು ನೋಡುವ ಸಮಯ ಬಂದಿದೆ.

Advertisement

ತಾಲೂಕಿನ ರೈತರ ಪಾಲಿಗೆ ಪ್ರಮುಖ ವಾಣಿಜ್ಯ ಬೆಳೆ ಎಂದೇ ಹೆಸರು ಪಡೆದಿರುವ ಎಲೆಕೋಸನ್ನು ನೂರಾರು ಎಕರೆ ಜಮೀನಿನಲ್ಲಿ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಪ್ರತಿ ಎಕರೆ ಎಲೆಕೋಸು ಬೆಳೆಯಲು ಕನಿಷ್ಠ ಎಂದರೂ 50 ಸಾವಿರ ರೂ. ಖರ್ಚು ಆಗಲಿದೆ. ಟೊಮೆಟೋ ಜೊತೆಗೆ ಎಲೆಕೋಸನ್ನು ರೈತರು ಪರ್ಯಾಯ ಬೆಳೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಎಲೆಕೋಸು ಬೆಳೆಗೆ ಈಗ ಸೀಸನ್‌ ಅಲ್ಲದಿದ್ದರೂ ಬೇಡಿಕೆ ಹೆಚ್ಚಾಗಿ, ಬೆಲೆ ಗಗನಕ್ಕೇರಿ ಪ್ರತಿ ಲೋಡಿಗೆ 2.5 ಲಕ್ಷ ರೂ.ಗೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

ಬೆಲೆ ಏರಿಕೆಗೆ ಕಾರಣ: ಹಲವು ಕಡೆ ಎಡಬಿಡದೆ ಸುರಿದ ಮಳೆಯಿಂದ ರಾಜ್ಯ, ಹೊರ ರಾಜ್ಯಗಳಲ್ಲಿ ಎಲೆಕೋಸು ಬೆಳೆಗೆ ಅಂಗಮಾರಿ, ಇತರೆ ರೋಗಗಳು ತಗುಲಿದ ಕಾರಣ ಬೆಳೆ ನಾಶವಾಗಿದೆ. ಬೆಳೆ ಕಡಿಮೆ ಇದ್ದು ಅವಕ ಸಹ ಕಡಿಮೆ ಇರುವ ಕಾರಣದಿಂದ ಏಕಾಏಕಿ ಬೆಲೆ ಏರಿಕೆ ಖಂಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ;- ನಿರುದ್ಯೋಗಿಗಳಿಗೆ ತರಬೇತಿ

ಕಳೆದ 2 ವರ್ಷಗಳಿಂದ ಕೊರೊನಾ ಲಾಕ್‌ಡೌನ್‌ ಆಗಿದ್ದ ವೇಳೆಯಲ್ಲಿ ಹೊರ ರಾಜ್ಯಗಳಿಗೆ ಸಾಗಾಣಿಕೆ ಮಾಡಲು ಬ್ರೇಕ್‌ ಆಗಿದ್ದ ಹಿನ್ನೆಲೆಯಲ್ಲಿ ಎಲೆಕೋಸು ಸೇರಿ ಬಹುತೇಕ ಎಲ್ಲಾ ಬೆಳೆಗೆ ಬೆಲೆ ಇಲ್ಲದೇ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು.

Advertisement

ಹೊರ ರಾಜ್ಯಗಳಿಂದ ಬೇಡಿಕೆ: ಎಲೆಕೋಸು ಚೆನ್ನೈ, ಕೊಯಮತ್ತೂರು, ವಿಜಯವಾಡ ಸೇರಿ ಹಲವು ಮಾರುಕಟ್ಟೆಗಳಿಂದ ಹೆಚ್ಚು ಬೇಡಿಕೆ ಬಂದಿರುವ ಕಾರಣ ತಾಲೂಕಿನಲ್ಲಿ ಬೆಳೆದ ಎಲೆಕೋಸಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಮಾರುಕಟ್ಟೆಗಳಲ್ಲಿ ಬೇಡಿಕೆಗೆ ಅನುಗುಣ ವಾಗಿ ಬೆಲೆ ಇಲ್ಲದ ಕಾರಣ ವ್ಯಾಪಾರಸ್ಥರು ನೇರವಾಗಿ ರೈತರ ಜಮೀನಿಗೆ ಹೋಗಿ ಖರೀದಿಸಲು ಮುಂದಾಗಿ ದ್ದಾರೆ.

ಎಲೆಕೋಸು ಸಕಾಲವಲ್ಲದಿದ್ದಾಗಲೂ ಬೆಲೆ ಏರಿಕೆ ಕಂಡಿರುವ ಕಾರಣ, ಬೆಳೆ ಇರುವ ರೈತರು ಮೂರು ಕಾಸು ಲಾಭ ಗಳಿಸಬಹುದು ಎಂಬ ಆಸೆಯಲ್ಲಿದ್ದರೆ, ಬೆಳೆ ಕಳೆದುಕೊಂಡ ರೈತರಿಗೆ ನಿರಾಸೆ ಮೂಡಿಸಿದೆ. ಅಕಾಲಿಕ ಮಳೆ ಒಂದು ಕಡೆ ಬೆಳೆಯನ್ನು ನಾಶ ಮಾಡಿ, ಮತ್ತೂಂದು ಕಡೆ ಬೆಲೆಯನ್ನು ಏರಿಕೆ ಮಾಡಿಸಿದೆ.

“ಸಕಾಲದಲ್ಲಿ ಎಲೆಕೋಸಿಗೆ ಬೆಲೆಯೇ ಇರುವುದಿಲ್ಲ. ಇದರಿಂದ ರೈತರಿಗೆ ನಷ್ಟ ಆಗುತ್ತದೆ. ಈಗ ಮಳೆ ಹೆಚ್ಚಾಗಿ ಹೊರ ರಾಜ್ಯಗಳಲ್ಲೂ ಬೆಳೆ ಇಲ್ಲದಂತೆ ಆಗಿದೆ. ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಗಗನಕ್ಕೇರಿದೆ. ತಾಲೂಕಿನಲ್ಲಿ ಎಲೆಕೋಸಿಗೆ ಹೊರ ರಾಜ್ಯಗಳಿಂದ ಬೇಡಿಕೆ ಇರುವ ಕಾರಣ ವ್ಯಾಪಾರಸ್ಥರು ತಾಮುಂದು ನೀಮುಂದು ಎಂಬಂತೆ ತೋಟಗಳಲ್ಲಿ ಖರೀದಿಗೆ ಮುಂದಾಗಿದ್ದಾರೆ.” ●ವೆಂಕಟರಾಮಪ್ಪ, ವ್ಯಾಪಾರಸ್ಥರು

“ನಿರಂತರ ಮಳೆಗೆ ಸಿಲುಕಿ ಟೊಮೆಟೋ ಸೇರಿ ಹಲವು ಬೆಳೆ ನಾಶವಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸಾವಿರಾರು ರೂ. ಬಂಡವಾಳ ಹಾಕಿ ಕೀಟನಾಶಕ ಸಿಂಪಡಣೆ ಮಾಡಿ ರೋಗಗಳಿಂದ ಕಾಪಾಡಿಕೊಂಡು ಬಂದಿರುವ ಎಲೆಕೋಸು ಬೆಲೆ ಏರಿಕೆ ಕಂಡಿದೆ. ಹಾಕಿದ ಬಂಡವಾಳದ ಜೊತೆಗೆ ಮೂರು ಕಾಸು ಆದಾಯ ಬರುವಂತಾಗಿದೆ.” ●ವೆಂಕಟೇಶಪ್ಪ, ರೈತ, ಕಾಮಸಮುದ್ರ.

Advertisement

Udayavani is now on Telegram. Click here to join our channel and stay updated with the latest news.

Next