ತಿಪಟೂರು: ಕೊಬ್ಬರಿಗೆ ಗರಿಷ್ಠ ಬೆಂಬಲ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಕಾಂಗ್ರೆಸ್ ವತಿ ಯಿಂದ ಜೂ.10ರಂದು ತಿಪಟೂರಿನಿಂದ ಬೆಂಗಳೂರಿನ ವಿಧಾನಸೌಧದವರೆಗೂ ಪಾದಯಾತ್ರೆ ಹಮ್ಮಿಕೊಳ್ಳ ಲಾಗಿದೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೀವ್ರ ಕುಸಿತ ಕಾಣುತ್ತಿರುವ ಕೊಬ್ಬರಿ ಬೆಲೆ ಏರಿಕೆಯಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ನೆರವಿಗೆ ಬರಬೇಕು. ಆದರೆ ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ 5 ಸಾವಿರ ರೂ. ಪ್ರೋತ್ಸಾಹ ಬೆಲೆ ನೀಡಿ ನಫೆಡ್ ಖರೀದಿ ಕೇಂದ್ರದ ಮೂಲಕ ಕೊಬ್ಬರಿ ಖರೀದಿಸುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು. ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಎಸ್.ನಿರಂಜನ್ ಮಾತನಾಡಿ, ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದ್ದು, ಸರ್ಕಾರಗಳು ರೈತರ ಕಣ್ಣೊರೆಸುವ ಕೆಲಸ ಬಿಟ್ಟು ಅವರ ಹಿತ ಕಾಯಬೇಕು.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ತೆಂಗು ಬೆಳೆಗಾರರ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಕೊಬ್ಬರಿಗೆ ಅತ್ಯಧಿಕ ಬೆಂಬಲ ಬೆಲೆ ನೀಡುವುದಾಗಿ ಘೋಷಿಸಿದ್ದರು, ಆದರೆ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ದೂರಿದರು. ಪ್ರಧಾನಿ ಮೋದಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಹೇಳಿದ್ದು ಕೇವಲ ಭರವಸೆಯಾಗಿ ಉಳಿದಿದೆ. ಪ್ರಧಾನಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ ಅಷ್ಟೇ.
ಕ್ವಿಂಟಲ್ ಕೊಬ್ಬರಿ 9 ಸಾವಿರ ರೂ.ಗಳಾಗಿದ್ದು ರೈತನಿಗೆ ಸಾಕಷ್ಟು ತೊಂದರೆ ಯಾಗುತ್ತಿದೆ. ರೈತನ ಆತ್ಮಹತ್ಯೆ ತಡೆಯಬೇಕಾದರೆ ತಕ್ಷಣ ಕೊಬ್ಬರಿ ಬೆಲೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಬ್ಲಾಕ್ ಕಾಂಗ್ರೆಸ್ ತಾ. ಅಧ್ಯಕ್ಷ ಕಾಂತರಾಜು, ಎಪಿ ಎಂಸಿ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷ ಮಂಜುನಾಥ್, ತಾಪಂ ಅಧ್ಯಕ್ಷ ಶಿವಸ್ವಾಮಿ, ಸದಸ್ಯ ಸಿದ್ದಾಪುರ ಸುರೇಶ್, ನಗರಸಭಾ ಸದಸ್ಯ ಯೋಗೇಶ್, ಮಾಜಿ ಸದಸ್ಯ ಸುಧಾಕರ್, ಮುಖಂಡರಾದ ಲೋಕನಾಥ್‌ಸಿಂಗ್, ಕಾಂತರಾಜು ಇದ್ದರು.